ಅನಾಥ ಮೃತದೇಹಗಳು: ಶವಾಗಾರದಲ್ಲಿರಿಸಲು ಹಣ ಪಾವತಿಸಿರುವ ಬಗ್ಗೆ ದಾಖಲೆಗಳಿಲ್ಲ
ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಸುತ್ತಮುತ್ತ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿರುವ ಮಧ್ಯೆಯೇ 2000ನೇ ಇಸವಿಯಿಂದ 2025ರವರೆಗೆ ಅನಾಥ ಮೃತದೇಹಗಳನ್ನು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶವಾಗಾರದಲ್ಲಿರಿಸಲು ಆಸ್ಪತ್ರೆಗೆ ಹಣ ಪಾವತಿಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಆಡಳಿತ ಹೇಳಿದೆ.
ಬೆಳ್ತಂಗಡಿಯ ಪ್ರಭಾಕರ ನಾಯ್ಕ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಕೋರಿ ಸಲ್ಲಿಸಿರುವ ಅರ್ಜಿಗೆ ಧರ್ಮಸ್ಥಳ ಗ್ರಾಪಂ ಈ ರೀತಿ ಲಿಖಿತ ಮಾಹಿತಿ ಒದಗಿಸಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2000ದಿಂದ 2025ರ ವರೆಗೆ ಅನಾಥ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆಸಿ ಮೃತರ ವಾರಸುದಾರರನ್ನು ಪತ್ತೆ ಹಚ್ಚುವ ಅವಧಿಯಲ್ಲಿ ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲು ಸಂಬಂಧಪಟ್ಟ ಆಸ್ಪತ್ರೆಗೆ ಹಣ ಪಾವತಿಸಿರುವ ಬಗ್ಗೆ ಯಾವುದೇ ದಾಖಲೆಗಳು ಗ್ರಾಪಂ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಗ್ರಾಪಂ ಆಡಳಿತ ಉತ್ತರ ನೀಡಿದೆ.