ಶ್ರೀ ಸಾಯಿ ಆಸ್ಪತ್ರೆ ತುರ್ತು ಸೇವಾ ಘಟಕ ಟ್ರಾಮಾ ಕೇರ್ ಸೆಂಟರ್ ಉದ್ಘಾಟನೆ
ಇಲ್ಲಿನ ಶಾಸ್ತ್ರೀ ವೃತ್ತದ ಸಮೀಪದ ಶ್ರೀಸಾಯಿ ಆಸ್ಪತ್ರೆಯಲ್ಲಿ ಮಂಗಳೂರು ಕೆಎಂಸಿಯ ತುರ್ತು ಚಿಕಿತ್ಸಾ ಘಟಕ ಹಾಗೂ ಟ್ರಾಮಾ ಕೇರ್ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.
ತುರ್ತು ವೈದ್ಯಕೀಯ ಸೇವೆ ಇಂದಿನ ಅನಿವಾರ್ಯತೆಯಾಗಿದೆ. ಅದಕ್ಕೆ ತಕ್ಕಂತೆ ಆರೋಗ್ಯ ಸೇವಾ ಕ್ಷೇತ್ರ ಇಂದು ಹೊಸ ಆವಿಷ್ಕಾರಗಳಿಂದ ಅದ್ವಿತೀಯವಾಗಿ ಬೆಳೆಯುತ್ತಿದೆ. ಕುಂದಾಪುರದ ಈ ತುರ್ತು ಸೇವಾ ಕೇಂದ್ರ ಇಡೀ ಕರಾವಳಿ ಭಾಗಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ. ವಿಷಮ ಪರಿಸ್ಥಿತಿಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳು ನುರಿತ ವೈದ್ಯರಿಂದ ಸೂಕ್ತ ಔಷಧೋಪಚಾರಗಳು ವಿಳಂಬವಿಲ್ಲದೆ ದೊರಕಿ ಜೀವ ರಕ್ಷಣೆಯಾಗುತ್ತದೆ ಎಂದವರು ವಿವರಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾತನಾಡಿ, ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಗಾಯಾಳುಗಳ ಜೀವ ಉಳಿಸಲು ಗೋಲ್ಡನ್ ಅವರ್‌ನಲ್ಲಿ ತುರ್ತು ಚಿಕಿತ್ಸೆ ಸಿಗುವುದು ಅಗತ್ಯ. ಇಂದಿನಿಂದ ಇಂತಹ ಸೌಲಭ್ಯ ನಿರಂತರವಾಗಿ ಶ್ರೀ ಸಾಯಿ ಆಸ್ಪತ್ರೆಯಲ್ಲೇ ಸಿಗುವುದರಿಂದ ದೂರದ ಆಸ್ಪತ್ರೆಗೆ ಪ್ರಯಾಣಿಸುವ ಅಗತ್ಯ ತಪ್ಪಿದೆ ಎಂದರು.
ಶ್ರೀ ಸಾಯಿ ಆಸ್ಪತ್ರೆಯವರು ಪೊಲೀಸ್ ಇಲಾಖೆಗೆ ಕೊಡಮಾಡಿದ ಟ್ರಾಫಿಕ್ ಬ್ಯಾರಿಕೇಡ್‌ಗಳನ್ನು ಹರಿರಾಮ್ ಶಂಕರ್ ಇಲಾಖೆಯ ಪರವಾಗಿ ಸ್ವೀಕರಿಸಿ ರಸ್ತೆ ಸುರಕ್ಷತೆ ಹೆಚ್ಚಿಸುವಲ್ಲಿ ಇವು ನೇರವಾಗುತ್ತವೆ ಎಂದು ಕೃತಜ್ಞತೆ ಸಲ್ಲಿಸಿದರು.
ಮಂಗಳೂರು ಕೆಎಂಸಿ ತುರ್ತು ವೈದ್ಯಕೀಯ ವಿಭಾಗದ ಸಲಹೆಗಾರ, ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಮಾತನಾಡಿ, ಈಗಾಗಲೆ ಪುತ್ತೂರು, ಕಕ್ಕಿಂಜೆ, ಬೆಳ್ತಂಗಡಿ ಮತ್ತು ಕೇರಳದಲ್ಲಿ ತುರ್ತು ವೈದ್ಯಕೀಯ ವಿಭಾಗ ಆರಂಭಿಸಿದ್ದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಹೃದಯಾಘಾತ, ಸ್ಟ್ರೋಕ್, ಗಾಯ, ವಿಷ ಸೇವನೆ, ಮಕ್ಕಳ ತುರ್ತು ಚಿಕಿತ್ಸಾ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ.
ಕುಂದಾಪುರದಲ್ಲಿ ಘಟಕ ಆರಂಭಿಸಿರುವುದು ಅತೀವ ಸಂತಸ ನೀಡಿದೆ. ಅದಕ್ಕಾಗಿ ಸಾಯಿ ಆಸ್ಪತ್ರೆ ಮುಖ್ಯಸ್ಥ ಡಾ. ರಂಜನ್ ಶೆಟ್ಟಿ ಅವರನ್ನು ಅಭಿನಂದಿಸು ತ್ತಿದ್ದೇವೆ. ಉತ್ತರ ಕನ್ನಡ, ಶಿವಮೊಗ್ಗ ಅಲ್ಲದೆ ಉಡುಪಿ ಜಿಲ್ಲೆಯ ಬಹುಭಾಗಗಳಿಗೆ ಈ ಘಟಕವು ಅನುಕೂಲಕರವಾಗಿದೆ ಎಂದರು.
ಕೆಎಂಸಿ ಮಂಗಳೂರು ಮಾರ್ಕೆಂಟಿಂಗ್ ವಿಭಾಗದ ಮುಖ್ಯಸ್ಥ ರಾಕೇಶ್ ಮಾತನಾಡಿ, ಆರೋಗ್ಯ ಮೂಲ ಸೌಕರ್ಯ ಬಲಪಡಿಸುವಲ್ಲಿ ಇದೊಂದು ಮಹತ್ವದ ಮೈಲಿಗಲ್ಲು, ಗ್ರಾಮಾಂತರದ ಜನರಿಗೆ ತ್ವರಿತ ಮತ್ತು ಗುಣಮಟ್ಟದ ಸೇವೆ ಸಿಗಲಿದೆ ಎಂದರು.
ಆಡಳಿತ ಶ್ರೀಸಾಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ರಂಜನ್ ಶೆಟ್ಟಿ ಮಾತನಾಡಿ, ಕೆಎಂಸಿ ಮಂಗಳೂರು ವಿಭಾಗದವರು ಕುಂದಾಪುರದಲ್ಲಿ ತುರ್ತು ಚಿಕಿತ್ಸಾ ಘಟಕ ಆರಂಭಿಸಲು ಅವಕಾಶ ಕೇಳಿದಾಗ ಸಂತೋಷದಿಂದ ಒಪ್ಪಿ ಅವಕಾಶ ಮಾಡಿಕೊಟ್ಟಿದ್ದೇವೆ. ಇದರಿಂದ ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಆರೋಗ್ಯ ಸೇವೆ ಪಡೆಯಲು ಸಹಕಾರಿಯಾಗಲಿದೆ. ಗೋಲ್ಡನ್ ಅವರ್‌ನಲ್ಲಿ ಒಬ್ಬರ ಜೀವ ಉಳಿಸಲು ಇದು ನೆರವಾಗಲಿದೆ. ಸಮುದಾಯದ ಆರೋಗ್ಯ ಬಲವರ್ಧನೆಗೊಳ್ಳಲಿದೆ. ಈ ಮೂಲಕ ನಾವು ದಿನದ ಯಾವುದೇ ಸಮಯದಲ್ಲೂ ಗುಣಮಟ್ಟದ ಸೇವೆ ನೀಡುವಲ್ಲಿ ಬದ್ಧರಾಗಿದ್ದೇವೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿ ಸತ್ಯಭ್ರತೋ ಬುಡಾರಿ, ಐಎಂಎ ಕುಂದಾಪುರ ಘಟಕಾಧ್ಯಕ್ಷ ಡಾ.ಬಾಲಕೃಷ್ಣ ಶೆಟ್ಟಿ ಶುಭಹಾರೈಸಿದರು. ಮೇಘನ ರಂಜನ್ ಶೆಟ್ಟಿ ಉಪಸ್ಥಿತರಿದ್ದರು. ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರ್ವಹಿಸಿ, ಡಾ. ಪ್ರಕೃತಿ ವಂದಿಸಿದರು.
