ಕುಂಭಾಸಿ ಆನೆಗುಡ್ಡೆ ದೇವಳ: ಹಿತ್ತಾಳೆ ಭಿತ್ತಿ ಚಿತ್ರ ನಿರ್ಮಾಣ ಯೋಜನೆಗೆ ಚಾಲನೆ
ಈ ಬಗ್ಗೆ ಭಾನುವಾರ ಬೆಳಗ್ಗೆ ವೇ.ಮೂ. ವೇದವ್ಯಾಸ ತಂತ್ರಿಗಳು ಮತ್ತು ಋತ್ವಿಜರಿಂದ ಸಾಮೂಹಿಕ ಪ್ರಾರ್ಥನೆ ಮತ್ತು ಹೋಮ ಹವನಾದಿ ಕರ್ಮಾಂಗಗಳನ್ನು ನೆರವೇರಿಸಿ ಪುನರ್ನಿಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವೇ.ಮೂ. ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಋತ್ವಿಜರು, ಕುಲ ಪುರೋಹಿತರಾದ ಹೂವಿನಕೆರೆ ವಾದಿರಾಜ ಭಟ್ ಆಶೀರ್ವಚನ ನೀಡಿದರು.
ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಸಹ ಧರ್ಮದರ್ಶಿ ನಿರಂಜನ ಉಪಾಧ್ಯಾಯ, ವಿಶ್ರಾಂತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ. ವ್ಯಾಸ ಉಪಾಧ್ಯಾಯ ಸಹೋದರರು, ಉಪಾಧ್ಯಾಯ ಕುಟುಂಬದವರು ಮತ್ತು ಅರ್ಚಕ-ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಸ್ತುತ ಇರುವ ಭಿತ್ತಿ ಚಿತ್ರಗಳನ್ನು ಸುಮಾರು 40 ವರ್ಷಗಳ ಹಿಂದೆ ಖ್ಯಾತ ಶಿಲ್ಪಿ ಶಿವಮೊಗ್ಗ ಕಾಶಿನಾಥ್ ತಂಡದವರು ಸಿಮೆಂಟ್ ಮತ್ತು ಕಬ್ಬಿಣ ಬಳಸಿ ರಚಿಸಿದ್ದರು. ಕಾಲಕಾಲಕ್ಕೆ ಪೈಂಟಿಂಗ್ ಮಾಡುತ್ತಿದ್ದರೂ ಚಿತ್ರಗಳು ಮಸುಕಾಗಿ ಕಾಣುತ್ತಿದ್ದುದರಿಂದ ಈಗ ಹಿತ್ತಾಳೆಯಿಂದ ನಿರ್ಮಿಸುವ ಯೋಜನೆ ಮಾಡಲಾಗಿದೆ. ಬೆಂಗಳೂರಿನ ಹ್ಯಾಬಿಟ್ ಆರ್ಟ್ ಎಂಬ ಸಂಸ್ಥೆಯು ಯೋಜನೆಯನ್ನು ನಿರ್ವಹಿಸುತ್ತಿದ್ದು, ಎಂಟು ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದೆ. ಸುಮಾರು 50 ಲಕ್ಷ ರೂ. ವೆಚ್ಚದ ಯೋಜನೆ ಇದಾಗಿದೆ. ಇನ್ನು ಕೆಲವೇ ಸಮಯದಲ್ಲಿ ಹೊಳೆಯುವ ಹಿತ್ತಾಳೆ ಭಿತ್ತಿ ಚಿತ್ರಗಳು ಆ ಸ್ಥಾನವನ್ನು ಅಲಂಕರಿಸಲಿವೆ.