ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಂಸದ ಕ್ಯಾ. ಚೌಟ ಅವರಿಗೆ ಪುತ್ತೂರಿನಲ್ಲಿ ಬಿಜೆಪಿಯಿಂದ ಸನ್ಮಾನ
ಇಲ್ಲಿನ ಪಕ್ಷದ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದರು, ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸುವುದಕ್ಕೆ ಭಾರತದ ಸರ್ವಪಕ್ಷಗಳ ನಿಯೋಗದಲ್ಲಿ ತೆರಳುವುದಕ್ಕೆ ತಮ್ಮನ್ನು ಗುರುತಿಸಿ ಅವಕಾಶ ನೀಡುವ ಮೂಲಕ ವಿಶೇಷ ಮನ್ನಣೆ ಪಡೆಯಲು ಸಾಧ್ಯವಾಗಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಭಾರತ ದೇಶವನ್ನು ವಿಶ್ವಸಂಸ್ಥೆಯಂತಹ ಜಾಗತಿಕ ಮಟ್ಟದ ಬಹುದೊಡ್ಡ ವೇದಿಕೆಯಲ್ಲಿ ನನ್ನಂತಹ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಪ್ರತಿನಿಧಿಸಲು ಅವಕಾಶ ಲಭಿಸಿರುವುದು ನಿಜಕ್ಕೂ ನನ್ನ ಪಾಲಿನ ಅತ್ಯಂತ ಅಮೂಲ್ಯದ ಅವಕಾಶ ಹಾಗೂ ಗೌರವದ ಕ್ಷಣ ಎಂಬುದಾಗಿ ಭಾವಿಸಿದ್ದೇನೆ. ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ನಾನು ವಿಶೇಷವಾದ ಧನ್ಯವಾದ ಸಲ್ಲಿಸುತ್ತೇನೆ. ಅಲ್ಲದೆ, ಈ ಅವಕಾಶವು ದಕ್ಷಿಣ ಕನ್ನಡದ ಜನರ ವಿಶ್ವಾಸ ಮತ್ತು ಆಶೀರ್ವಾದದ ಫಲವಾಗಿದ್ದು, ಇದಕ್ಕಾಗಿ ಜಿಲ್ಲೆಯ ಜನತೆಗೆ ಈ ಸಂದರ್ಭದಲ್ಲಿ ನನ್ನ ವಿಶೇಷ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ೮೦ನೇ ಅಧಿವೇಶನದಲ್ಲಿ ಕ್ಯಾ. ಚೌಟ ಅವರು ದೇಶದ ವಿವಿಧ ಪಕ್ಷಗಳ ಸಂಸದರನ್ನು ಒಳಗೊಂಡಿರುವ ೧೫ ಮಂದಿ ನಿಯೋಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ವಿಶ್ವದ ಅತ್ಯುನ್ನತ ವೇದಿಕೆಯಲ್ಲಿ ದೇಶದ ಪರವಾಗಿ ಭಾರತದ ಸುಸ್ಥಿರ ಅಭಿವೃದ್ಧಿಯ ಕುರಿತಂತೆ ಪರಿಣಾಮಕಾರಿಯಾಗಿ ವಿಚಾರ ಮಂಡಿಸಿ ಗಮನ ಸೆಳೆದಿದ್ದರು.
ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಬಿ. ಶಿವಕುಮಾರ್, ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ , ಉಪಾಧ್ಯಕ್ಷ ಬಾಲಚಂದ್ರ, ಬಿಜೆಪಿ ಮುಖಂಡರಾದ ಜೀವಂಧರ್ ಜೈನ್, ಹರಿಪ್ರಸಾದ್ ಯಾದವ್, ಪುರುಷೋತ್ತಮ, ಪಂಚಾಯತ್ ಸದಸ್ಯರು, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
ಸಂಸದರಿಂದ ಅಹವಾಲು ಸ್ವೀಕಾರ:
ಪುತ್ತೂರಿಗೆ ಭೇಟಿ ನೀಡಿದ ಸಂಸದ ಕ್ಯಾ.ಚೌಟ ಅವರು ಇಂದು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದಾರೆ. ಇಂದಿನ ಸಾರ್ವಜನಿಕರ ಭೇಟಿ ವೇಳೆ ಕಚೇರಿಗೆ ಬಂದಿದ್ದ ಹಲವು ನಾಗರಿಕರ ಕುಂದು-ಕೊರತೆ ಆಲಿಸಿದ ಸಂಸದರು, ಸ್ಥಳದಲ್ಲೇ ಪರಿಹಾರ ಒದಗಿಸಿದ್ದು, ಇನ್ನು ಕೆಲ ಅಹವಾಲು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಹಾದು ಹೋಗುವ ಕೆಲವು ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.