 
ಶಾಸ್ತ್ರಿ ವೃತ್ತದಲ್ಲಿ ಶಾಶ್ವತ ಕನ್ನಡ ಧ್ವಜ ಕಟ್ಟೆ ನಿರ್ಮಾಣ: ಕನ್ನಡ ಧ್ವಜ ಹಾರಿಸಲು ಬೇಡಿಕೆ
ಕುಂದಾಪುರ: ಕನ್ನಡ ಸಂಘಟನೆಗಳ ಒಕ್ಕೂಟ ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ ತಾಲೂಕು ಘಟಕದ ವತಿಯಿಂದ ಇಲ್ಲಿನ ಶಾಸ್ತ್ರಿ ಸರ್ಕಲ್ನಲ್ಲಿ ಕನ್ನಡ ಬಾವುಟ ಹಾರಿಸಲು ಅನುಮತಿ ನೀಡಬೇಕು, ಶಾಶ್ವತ ಧ್ವಜಕಟ್ಟೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆ ಮುಂದಿರಿಸಿ ಪುರಸಭೆಗೆ ಮನವಿ ಸಲ್ಲಿಸಲಾಯಿತು.
ಕರವೇ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಉಪ್ಪುಂದ ಮಾತನಾಡಿ, ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಕನ್ನಡ ಧ್ವಜ ನಮ್ಮ ಭಾಷಾ ಹೆಮ್ಮೆಯ ಸಂಕೇತವಾಗಿದ್ದು ಸ್ಥಳೀಯ ಜನರಲ್ಲಿ ಕನ್ನಡ ಬಗ್ಗೆ ಗೌರವ ಮತ್ತು ಒಗ್ಗಟ್ಟಿನ ಭಾವನೆ ಬೆಳೆಯಲು ಸಹಕಾರಿಯಾಗಿದೆ. ಇಂತಹ ಧ್ವಜ ಕಟ್ಟೆಗಳು ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಶಾಶ್ವತವಾಗಿ ಸ್ಥಾಪಿತವಾಗಬೇಕೆಂಬ ನಿಟ್ಟಿನಲ್ಲಿ ಕುಂದಾಪುರದಲ್ಲಿ ಶಾಶ್ವತ ಕನ್ನಡ ಧ್ವಜ ಕಟ್ಟೆ ನಿರ್ಮಾಣಕ್ಕೆ ಅವಕಾಶ ನೀಡುವ ಕುರಿತು ಪುರಸಭೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಸಾಮಾನ್ಯ ಸಭೆಯಲ್ಲಿ ತಿರಸ್ಕರಿಸಲಾಗಿದೆ. ಎರಡು ಸಭೆಗಳಲ್ಲೂ ಅವಕಾಶ ನಿರಾಕರಿಸಲಾಗಿದೆ. ಕುಂದಾಪುರ, ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುವ ಪ್ರದೇಶವಾಗಿದೆ. ಇಲ್ಲಿ ಶಾಶ್ವತ ಕನ್ನಡ ಧ್ವಜ ಕಟ್ಟೆ ನಿರ್ಮಿಸುವ ಉದ್ದೇಶದಿಂದ ನಾವು ಮುಂದಾಗಿರುವಾಗ, ಪುರಸಭೆಯು ಅದಕ್ಕೆ ಅನುಮತಿ ನೀಡದಿರುವುದು ಸರಿಯಲ್ಲ. ಇದು ಕನ್ನಡ ಭಾಷೆಯ ಹಾಗೂ ಸಂಸ್ಕೃತಿಯ ವಿರೋಧಿ ನಡೆ ಎಂದು ಪರಿಗಣಿಸಬೇಕಾಗುತ್ತದೆ. ಈ ನಿರ್ಧಾರದ ವಿರೋಧದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರ ಹೋರಾಟ ಆರಂಭಿಸಲು ಸಿದ್ಧವಾಗಿದೆ ಎಂದು ಹೇಳಿದರು.
ಕನ್ನಡ ಧ್ವಜದ ಕುರಿತು ಯಾವುದೇ ಅಸಹನೆ ಇಲ್ಲ. ಕನ್ನಡ ನಮ್ಮ ಉಸಿರು, ಅನ್ನ. ಹಾಗಿರುವಾಗ ವಿರೋಧ ಮಾಡುವ ಪ್ರಶ್ನೆಯೇ ಇಲ್ಲ. ಸಂಚಾರ ಸಾರಿಗೆಗೆ ತೊಂದರೆ ಆಗದಂತೆ ಹಾಕುವುದು ಆದ್ಯತೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿಲುವು ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷ ಮೋಹನದಾಸ ಶೆಣೈ, ಮುಖ್ಯಾಧಿಕಾರಿ ಆನಂದ ಜೆ. ಹೇಳಿದರು.
ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ, ಕುಂದಾಪುರ ಘಟಕ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೆ.ಸಿ., ಕುಂದಾಪುರ ಘಟಕದ ಪದಾಧಿಕಾರಿಗಳಾದ ಅಣ್ಣಪ್ಪ ಪೂಜಾರಿ, ರಾಜು ಬಸ್ರೂರು, ಶೇಖ್ ಹಫೀಜ್, ಜೋಯ್ ಜೆ. ಕರ್ವಾಲೋ, ಶಿವಾನಂದ, ದಿನೇಶ್ ಸಾರಂಗ್, ಭುಜಂಗ ಶೆಟ್ಟಿ, ಉಡುಪಿ ಜಿಲ್ಲಾ ಘಟಕದ ಪದಾದಿಕಾರಿಗಳು, ಸದಸ್ಯರು, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಕರವೇ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಉಪ್ಪುಂದ ಹಾಗೂ ಸಂಘಟನೆಯ ಸದಸ್ಯರು ಪುರಸಭೆಗೆ ಆಗಮಿಸಿದಾಗ ಮುಖ್ಯಾಧಿಕಾರಿ, ಅಧ್ಯಕ್ಷರು ಇರಲಿಲ್ಲ. ಈ ವಿಚಾದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಶಾಶ್ವತ ಧ್ವಜ ಕಟ್ಟೆ ನಿರ್ಮಾಣಕ್ಕೆ ಅಗತ್ಯ ಅನುಮತಿ ನೀಡಬೇಕು. ಇಲ್ಲದಿದ್ದರೆ ಪುರಸಭೆ ಎದುರು ಧರಣಿ ಕೂರಲಾಗುವುದು. ಕನ್ನಡ ವಿರೋಧಿ ನಿಲುವು ತಳೆದ ಪುರಸಭೆ ಆಡಳಿತದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕರವೇ ಅಧ್ಯಕ್ಷರು ಎಚ್ಚರಿಸಿದ್ದಾರೆ.