‘ಕೊಡಗಿನ ಕುಲದೇವತೆ ಕಾವೇರಿ’: ಪುಸ್ತಕ ಬಿಡುಗಡೆ
ಅಮೃತ ಪ್ರಕಾಶ ಪತ್ರಿಕೆಯ 45ನೇ ಸರಣಿ ಕೃತಿ ಬಿಡುಗಡೆಯ ಭಾಗವಾಗಿ ಕನ್ನಡ, ಇಂಗ್ಲಿಷ್, ಅರೆಭಾಷೆ ಮತ್ತು ತಮಿಳು ಹೀಗೆ ನಾಲ್ಕು ಭಾಷೆಯ ಪುಸ್ತಕವನ್ನು ಮಂಗಳೂರು ಕೊಡವ ಸಮಾಜದ ಉಪಾಧ್ಯಕ್ಷೆ ಬೊಳ್ಳಿಯಂಡ ಕೃತಿ ಸೋಮಯ್ಯ ಕೃತಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಕಾವೇರಿ ಕೊಡಗಿನ ಹೆಮ್ಮೆ. ತೀರ್ಥ ರೂಪಿಣಿಯಾಗಿ ಕೊಡಗಿನಲ್ಲಿ ಉದ್ಭವವಾಗಿ ಬಂಗಾಳಕೊಲ್ಲಿಯವರೆಗೆ ಹರಿಯುತ್ತಾ ತನ್ನ ಮಡಿಲಿನಲ್ಲಿ ಹಸುರು ಸಸ್ಯ ರಾಶಿ ಕಂಗೊಳಿಸುವಂತೆ ಮಾಡುತ್ತಾಳೆ. ಆಕೆಯ ಬಗ್ಗೆ ಮಕ್ಕಳಿಂದ ಹಿರಿಯರ ವರೆಗೆ ಸರಳವಾಗಿ ಅರ್ಥವಾಗುವಂತೆ ಕೃತಿಕಾರರು ಚಿತ್ರ ಸಹಿತ ಲೇಖನವನ್ನು ಬರೆದಿದ್ದಾರೆ ಎಂದರು.
ಕೃತಿಕಾರ ಬಿ.ಕೆ. ಗಣೇಶ್ ರೈ ಮಾತನಾಡಿ, ಈ ಹಿಂದೆ ಜಲವರ್ಣದಲ್ಲಿ ರಚಿಸಿದ ಚಿತ್ರಗಳನ್ನು ಈಗ ಡಿಜಿಟಲ್ ಗ್ರಾಫಿಕ್ಸ್ ಮೂಲಕ ಅಳವಡಿಸಲಾಗಿದೆ. ಇದರಿಂದ ಮಕ್ಕಳಿಗೂ ಕಥೆ ಅರ್ಥವಾಗಲಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಗೌಡ ಮಾವಜಿ ಮಾತನಾಡಿ, ಅರೆ ಭಾಷೆ ಅಕಾಡೆಮಿಯ ಸಹಕಾರದಿಂದ ಅರೆ ಭಾಷೆಯಲ್ಲೂ ಪುಸ್ತಕವನ್ನು ಹೊರತರಲಾಗಿದೆ. ಇದು ಅರೆ ಭಾಷೆ ಸಾಹಿತ್ಯಕ್ಕೂ ಒಂದು ದೊಡ್ಡ ಕೊಡುಗೆಯಾಗಿದೆ ಎಂದರು.
ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಡಾ. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.