ರಥಬೀದಿ ಕಾಲೇಜಿನಲ್ಲಿ ಜಾನಪದ ವೈವಿಧ್ಯದ ಅನಾವರಣ
Monday, October 27, 2025
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ, ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಮತ್ತು ಐಕ್ಯೂಏಸಿ ವತಿಯಿಂದ ಏರ್ಪಡಿಸಲಾಗಿದ್ದ ‘ಜಾನಪದ ಸಂಗಮ’ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ದೈವ ನರ್ತಕ ಉಮೇಶ್ ಪಂಬದ ಇವರು ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಮತ್ತು ಕರ್ನಾಟಕದ ಇತರ ಜಿಲ್ಲೆಗಳ ಪರಂಪರಾಗತ ಆಚರಣೆ, ಆಹಾರ ಪದ್ಧತಿ, ವೈವಿಧ್ಯಮಯ ಕಲಾ ಪ್ರಾಕಾರಗಳು, ಆಟಗಳು, ಉಡುಗೆ ತೊಡುಗೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ಜನಪದ ಸಂಸ್ಕೃತಿಯನ್ನು ಪ್ರತಿನಿಧಿಸುವ ಪರಿಕರಗಳ ಸಂಗ್ರಹಗಳನ್ನು ಮತ್ತು ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಿದರು. ಮೇಘಾಲಯ ಮತ್ತು ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಅಲ್ಲಿನ ಸಾಂಪ್ರದಾಯಿಕ ಆಹಾರ ಮತ್ತು ಜನಪದ ವೈವಿಧ್ಯಗಳನ್ನು ಪ್ರದರ್ಶಿಸಿದ್ದು ಕಾರ್ಯಕ್ರಮದ ಆಕರ್ಷಣೆಯಾಗಿತ್ತು.
ಈ ಸಂದರ್ಭದಲ್ಲಿ ತಮ್ಮ ಉನ್ನತ ಶಿಕ್ಷಣದ ಜೊತೆಗೆ ಪರಂಪರಾಗತ ದೈವ ನರ್ತನ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೀತನ್ ಅವರನ್ನು ಸನ್ಮಾನಿಸಲಾಯಿತು.
ಐಕ್ಯೂಏಸಿ ಸಂಯೋಜಕ ದೇವಿಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ. ದುಗ್ಗಪ್ಪ ಕೆ., ಸಾಂಸ್ಕೃತಿಕ ವೇದಿಕೆಯ ಡಾ. ಜ್ಯೋತಿಪ್ರಿಯ, ದೈವನರ್ತಕ ಮುಕೇಶ್ ಪಂಬದ, ಬೋಧಕ ವರ್ಗದವರು ಮತ್ತು ವಿದ್ಯಾರ್ಥಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
