ಎಂಆರ್ಪಿಎಲ್ನಲ್ಲಿ ‘ಒಂದು ಮರ ತಾಯಿಯ ಹೆಸರಲ್ಲಿ’ ಅಭಿಯಾನ
ಈ ಅಭಿಯಾನದಡಿ ಒಟ್ಟು 5,034 ಸಸಿಗಳನ್ನು ವಿವಿಧ ಸ್ಥಳಗಳಲ್ಲಿ ನೆಡಲಾಗಿದ್ದು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಜರುಗಿತು.
ಪ್ರತಿ ನಾಗರಿಕರೂ ತಮ್ಮ ತಾಯಿಯ ಗೌರವಾರ್ಥವಾಗಿ ಒಂದು ಮರ ನೆಡುವಂತೆ ಪ್ರೋತ್ಸಾಹಿಸುವ ಈ “ಒಂದು ಮರ ತಾಯಿಯ ಹೆಸರಲ್ಲಿ” ಅಭಿಯಾನವು ಭಾರತದ ಹಸಿರು ಆವರಣವನ್ನು ವಿಸ್ತರಿಸುವುದಲ್ಲದೆ, ಪರಿಸರ ಸಂರಕ್ಷಣೆಯ ಚಳವಳಿಯನ್ನು ಬಲಪಡಿಸುವ ಉದ್ದೇಶ ಹೊಂದಿದೆ.
ಕಾರ್ಯಕ್ರಮದಲ್ಲಿ ಎಂಆರ್ಪಿಎಲ್ ನೌಕರರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿ, ಸಂಸ್ಥೆಯ ಪರಿಸರ ಸ್ನೇಹಿ ನಿಲುವು ಮತ್ತು ಜೈವ ವೈವಿಧ್ಯ ಸಂರಕ್ಷಣೆಯ ಬದ್ಧತೆಯನ್ನು ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2024ರ ವಿಶ್ವ ಪರಿಸರ ದಿನದಂದು ರಾಷ್ಟ್ರವ್ಯಾಪಿಯಾಗಿ ಈ ಅಭಿಯಾನವನ್ನು ಪ್ರಾರಂಭಿಸಿದ್ದರು. ಸಚಿವಾಲಯದ ಇತ್ತೀಚಿನ ವರದಿ ಪ್ರಕಾರ, ಈ ಯೋಜನೆಯಡಿ ದೇಶದಾದ್ಯಂತ ಈಗಾಗಲೇ 80 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ವಾರ್ಷಿಕ ಗುರಿಯನ್ನು ಮುಂಚಿತವಾಗಿ ಸಾಧಿಸಲಾಗಿದೆ.
2025ರಲ್ಲಿ ಆರಂಭವಾದ ಎರಡನೇ ಹಂತ ‘ಒಂದು ಮರ ತಾಯಿಯ ಹೆಸರಲ್ಲಿ 2.0’ ಅಭಿಯಾನವು ಶಾಲೆಗಳು, ಪರಿಸರ ಕ್ಲಬ್ಗಳು ಹಾಗೂ ಸ್ಥಳೀಯ ಸಮುದಾಯಗಳನ್ನು ಒಳಗೊಂಡು ಮಿಷನ್ ಲೈಫ್ ಉದ್ದೇಶದೊಂದಿಗೆ ದೀರ್ಘಕಾಲಿಕ ಪರಿಸರ ಜಾಗೃತಿ ಬೆಳೆಸುವುದಕ್ಕೆ ಕಟಿಬದ್ಧವಾಗಿದೆ.