ಅನಿವಾಸಿ ಕನ್ನಡಿಗ ಝಕರಿಯಾ ಜೋಕಟ್ಟೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಬಜ್ಪೆಗುತ್ತು ಹಾಜಿ ಬಿ. ಶೇಕುಂಞಿ ಹಾಗೂ ಕತೀಜಮ್ಮ ದಂಪತಿ ಪುತ್ರನಾಗಿರುವ ಝಕರಿಯಾ ಜೋಕಟ್ಟೆ 1958 ಮೇ 10 ರಂದು ಜೋಕಟ್ಟೆಯ ತೋಕೂರಿನಲ್ಲಿ ಜನಿಸಿದರು. 5 ಮಕ್ಕಳಲ್ಲಿ ಹಿರಿಯರಾದ ಝಕರಿಯಾ ಪ್ರೌಢ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಕಠಿಣ ಕೆಲಸ ಮಾಡಿ ಜೀವನ ಪ್ರಾರಂಭಿಸಿದರು. ಬೀದಿ ಬೀದಿಗಳಲ್ಲಿ ಬೆಲ್ಲ ವ್ಯಾಪಾರ, ವೆಲ್ಡಿಂಗ್ ಕೆಲಸ, ಗೋಣಿ ಹೊರುವ ಕಾರ್ಮಿಕನಾಗಿ, ವಿದೇಶದಲ್ಲಿ 28ನೇ ಮಹಡಿಗೆ ಸಿಮೆಂಟು ಹೊತ್ತು ಶ್ರಮಪಟ್ಟು ದುಡಿದಿದ್ದಾರೆ.
ಹಲವಾರು ವರ್ಷಗಳ ಅವರ ಕಠಿಣ ಪರಿಶ್ರಮ, ತ್ಯಾಗ ಹಾಗೂ ಅನುಭವದ ಫಲವಾಗಿ 2008ರಲ್ಲಿ ಮೂವರು ಕೆಲಸಗಾರರನ್ನು ಇಟ್ಟುಕೊಂಡು ಹಿರಿಯ ಪುತ್ರ ಝಹೀರ್ ರನ್ನೂ ಸೇರಿಸಿಕೊಂಡು ಸೌದಿ ಅರೇಬಿಯಾದ ಜುಬೈಲ್ ನಲ್ಲಿ "ಅಲ್ ಮುಝೈನ್" ಮೇನ್ ಪವರ್ ಕಂಪೆನಿಯನ್ನು ಸ್ಥಾಪಿಸಿದರು. ಅವಿರತ ದುಡಿಮೆಯಿಂದ ಹಂತಹಂತವಾಗಿ ಬೆಳೆದ ಅಲ್ ಮುಝೈನ್ ಕಂಪೆನಿಯಲ್ಲಿ ಪ್ರಸ್ತುತ 8 ಸಾವಿರ ಉದ್ಯೋಗಿಗಳಿದ್ದು, 2027ಕ್ಕೆ 10 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಅಲ್ ಮುಝೈನ್ ಬಳಿಕ ಹತ್ತಾರು ಬೇರೆ ಬೇರೆ ಕಂಪೆನಿಗಳನ್ನು ಸ್ಥಾಪಿಸಿದ ಝಕರಿಯಾ ಅವರು ಸೌದಿ ಅರೇಬಿಯಾ ಅಲ್ಲದೇ ಬಹರೈನ್, ಯುಎಇ, ಒಮಾನ್, ಕತಾರ್, ಕುವೈಟ್, ಲಂಡನ್ ಹಾಗೂ ಭಾರತಕ್ಕೆ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಶಿಕ್ಷಣ ಸಂಸ್ಥೆಗೂ ಕೈಯಾಡಿಸಿರುವ ಅವರು ಅಲ್ ಕೋಬರ್ ನಲ್ಲಿ ಯೇನೆಪೋಯ ಸಹಯೋಗದೊಂದಿಗೆ ಅಂತರಾಷ್ಟ್ರ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದು, ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಹೊಂದುವುದು ಮುಂದಿನ ಯೋಜನೆಯಾಗಿದೆ. ಏಐ ಇನ್ನೋವೇಶನ್ ಯೋಜನೆ, ಕರಾವಳಿಯ ಅಭಿವೃದ್ಧಿ ಗುರಿಯನ್ನೂ ಹೊಂದಿದ್ದಾರೆ.
ಪ್ರಸ್ತುತ ಮಂಗಳೂರು ಬೋಳಾರ್ ನಿವಾಸಿಯಾಗಿರುವ ಝಕರಿಯಾ ಜೋಕಟ್ಟೆ ಪತ್ನಿ ಹಝ್ರ ಝಕರಿಯಾ, ಮೂವರು ಪುತ್ರರಾದ ಝಹೀರ್, ನಝೀರ್ ಮತ್ತು ಝಾಹಿದ್ ಅವರು ವಿದೇಶದಲ್ಲಿ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ಹಿದಾಯ ಫೌಂಡೇಶನ್, ಝರಾ ಫ್ಯಾಮಿಲಿ ಚಾರಿಟಿ ಟ್ರಸ್ಟಿನ ಅಧ್ಯಕ್ಷರಾಗಿರುವ ಝಕರಿಯಾ ಜೋಕಟ್ಟೆ ರಾಜ್ಯದ ಹಲವಾರು ಸಂಘಸಂಸ್ಥೆಗಳ ನಿರ್ದೇಶಕ, ಸಲಹೆಗಾರ, ಪ್ರಾಯೋಜಕರಾಗಿ ಸಹಸ್ರಾರು ಬಡ, ಅಶಕ್ತರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಾಗೂ ಉದ್ಯಮದ ಯಶಸ್ವಿಗಾಗಿ ದೇಶ-ವಿದೇಶಗಳಿಂದ ಹಲವಾರು ಪ್ರಶಸ್ತಿ ಸನ್ಮಾನಗಳು ಅರಸಿ ಬಂದಿವೆ.
ಸಮಾಜದಲ್ಲಿ ಸೇವಗೈಯುವಾಗ ಪ್ರಶಸ್ತಿಯನ್ನು ನಾನೆಂದೂ ಬಯಸಿಲ್ಲ. ಅದಕ್ಕಾಗಿ ಅರ್ಜಿಯೂ ಹಾಕಿಲ್ಲ. ನನ್ನ ಕೆಲ ಸ್ನೇಹಿತರು ನನಗೆ ತಿಳಿಯದೇ ಇದರ ಹಿಂದೆ ಕೆಲಸ ಮಾಡಿ ಅಚ್ಚರಿಯ ಕೊಡುಗೆ ನೀಡಿದ್ದಾರೆ. ನಾನು ಬಡತನದಿಂದಲೇ ಬೆಳೆದು ಮೇಲೆ ಬಂದವ. ಅಶಕ್ತರ ನೋವು ಗೊತ್ತಿದೆ. ಅದಕ್ಕಾಗಿ ಸದಾ ಸ್ಪಂದಿಸುತ್ತೇನೆ. ಪ್ರಶಸ್ತಿ ಪ್ರಕಟವಾಗುವಾಗ ನಾನು ಸೌದಿ ಅರೇಬಿಯಾದಲ್ಲಿದ್ದೇನೆ. ಈಗಲೂ ಅಲ್ಲಿರುವೆ. ನವಂಬರ್ 1ರಂದು ನನ್ನ ಸ್ನೇಹಿತರೋರ್ವರ ಮದುವೆ ಸಮಾರಂಭವು ಜೈಪುರದಲ್ಲಿ ನಡೆಯಲಿದ್ದು, ಅದಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾಗ ಪ್ರಶಸ್ತಿಯ ಪ್ರಕಟಣೆ ದಿಗ್ಭ್ರಮೆ ಹುಟ್ಟಿಸಿದೆ. ಪ್ರಶಸ್ತಿಯ ಗೌರವವು ಸಾಮಾಜಿಕ ಜವಾಬ್ದಾರಿಯ ಜೊತೆಗೆ ಸಮಾಜದ ಹೊರೆಯನ್ನೂ ಹೆಚ್ಚಿಸಿದೆ. ರಾಜ್ಯ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಝಕರಿಯಾ ಜೋಕಟ್ಟೆ ಮಾಧ್ಯಮಕ್ಕೆ ತಿಳಿಸಿದ್ದಾರೆ.