ಕಪಿಲಾ ಗೋ ಶಾಲೆಯಲ್ಲಿ ಸಾರ್ವಜನಿಕ ಗೋ ಪೂಜೆ
ಮಂಗಳೂರು: ಮಂಗಳೂರು ತಾಲೂಕಿನ ಪೇಜಾವರ ಕೆಂಜಾರಿನಲ್ಲಿರುವ ಕಪಿಲಾ ಗೋ ಶಾಲೆಯಲ್ಲಿ ಅ.22ರಂದು ಬೆಳಗ್ಗೆ 6 ರಿಂದ 11.30ರವರೆಗೆ 108 ಕಪಿಲಾ ಗೋವುಗಳನ್ನು ಒಂದೆಡೆ ಸೇರಿಸಿ ಸಾರ್ವಜನಿಕ ಗೋ ಪೂಜೆಯನ್ನು ಆಯೋಜಿಸಲಾಗಿದೆ ಎಂದು ಕಪಿಲಾ ಗೋ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪಿಲಾ ಗೋ ಶಾಲೆಯಲ್ಲಿ ಸುಮಾರು 700ರಷ್ಟು ಗೋವುಗಳಿವೆ. ಪ್ರಕೃತಿ ಪಶು ಸಂರಕ್ಷಣೆ, ಅಳಿವಿನಂಚಿನ ದೇಸಿ ಗೋವು ಸಂತತಿ ರಕ್ಷಣೆ ಹಾಗೂ ಗೋವಿನ ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆರಂಭಗೊಂಡ ಗೋ ಶಾಲೆಯಲ್ಲಿ ಈಗ ಗೋವುಗಳು ತುಂಬಿವೆ ಎಂದರು.
ಇದೇ ಸಂದರ್ಭ ದೀಪಾವಳಿಯ ವಿಶೇಷ ಸಂದರ್ಭ ಸಾರ್ವಜನಿಕರಿಗೆ ಗೋವಿನ ಅನುಗ್ರಹ ಪ್ರಾಪ್ತಿಗಾಗಿ ಕಪಿಲಾ ಪಾರ್ಕ್ ಗೋ ಶಾಲೆಯಲ್ಲಿ ನಡೆಯಲಿರುವ 108 ಕಪಿಲಾ ಗೋಪುಜಾ ಕಾರ್ಯಕ್ರಮದ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಗೋವಿನ ಸಂತತಿ ರಕ್ಷಣೆಗಾಗಿ 2012ರಲ್ಲಿ ಸ್ಥಾಪಿಸಲಾಗಿದ್ದು, 2 ಗೋವುಗಳಿಂದ ಆರಂಭವಾದ ಈ ಕಪಿಲಾ ಗೋ ಶಾಲೆ ಇಂದು 700ಕ್ಕೂ ಅಧಿಕ ಗೋವಿಗಳು ಇಲ್ಲಿ ಪಾಲನೆಯಾಗುತ್ತಿದೆ. ಕಪಿಲಾ ಗೋ ಶಾಲೆಯನ್ನು ಅಳಿವಿನಂಚಿನ ದೇಸಿ ಗೋವು ಸಂತತಿ ರಕ್ಷಣೆ ಉದ್ದೇಶದಿಂದ ಮಾತ್ರ ಮುನ್ನಡೆಸಲಾಗುತ್ತಿದ್ದು, ಯಾವುದೇ ಗೋವು ಸಂಬಂಧಿತ ಉದ್ಯಮ ಇಲ್ಲಿ ನಡೆಸಲಾಗುತ್ತಿಲ್ಲ. ದಿನದಿಂದ ದಿನ ಇಲ್ಲಿ ಗೋವುಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಇಲ್ಲಿನ ಗೋವುಗಳ ಹಾಲನ್ನು ಮಾರಲಾಗುತ್ತಿಲ್ಲ, ಬದಲಾಗಿ ಕರುಗಳಿಗೆ ಉಣಿಸಲಾಗುತ್ತಿರುವುದು ಇಲ್ಲಿನ ವಿಶೇಷ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ಸುರೇಶ್ ಶೆಟ್ಟಿ ಮಾತನಾಡಿ, ಕಪಿಲಾ ಗೋ ಶಾಲೆಯಲ್ಲಿ ಗೋವುಗಳು ಸಂಖ್ಯೆ ಹೆಚ್ಚುತ್ತಿರುವುದರಿಂದ ನಿರಾಳವಾಗಿ ನಡೆದಾಡಲು ಸ್ಥಳದ ಕೊರತೆ ಇದೆ. ಸುಮಾರು 50ಸಾವಿರ ಚ.ಅಡಿ ವಿಸ್ತೀರ್ಣದ ಗೋ ಶಾಲೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸುಮಾರು 4 ಕೋ.ರೂ ವೆಚ್ಚದ ಯೋಜನೆಯ ನೀಲನಕಾಶೆ ಸಿದ್ದಪಡಿಸಲಾಗಿದೆ. ದಾನಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಸುಸಜ್ಜಿತ ಗೋ ಶಾಲೆ ನಿರ್ಮಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ ಜತೆಗೆ ಶ್ರೀ ಅಯ್ಯಪ್ಪ ಭಕ್ತವೃಂದ ಆಕಾಶಭವನ ಹಾಗೂ ಶಿವನಗರ ಭಜಕ ವೃಂದ ಶಿವನಗರ ಕಾವೂರು ತಂಡಗಳಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ ಎಂದರು.
ಗೋತಳಿ ಸಂರಕ್ಷಣೆ..
ರಾಜ್ಯದಲ್ಲೇ ಅತೀ ವಿರಳವಾಗಿರುವ ದೇಸಿ ಗೋವು ಸಂತತಿಯಾದ ಕಪಿಲಾ ಗೋತಳಿಯು ಸಧ್ಯಕ್ಕೆ ಕಪಿಲಾ ಗೋ ಶಾಲೆಯಲ್ಲಿ ಅತೀ ಹೆಚ್ಚಾಗಿ ಸಂರಕ್ಷಿಸಲಾಗಿದೆ. ಪೌರಾಣಿಕವಾಗಿ ಅತೀ ಹೆಚ್ಚಿನ ಮಹತ್ವ ಪಡೆದಿರುವ ಈ ಗೋ ತಳಿ ನಶಿಸುವ ಹಂತದಲ್ಲಿರುವುದರಿಂದ ಅತೀ ಹೆಚ್ಚು ಕಪಿಲಾ ಗೋತಳಿ ಸಂರಕ್ಷಣೆ ಮಾಡಲಾಗಿದೆ. ಉತ್ತಮ ಔಷಧೀಯ ಗುಣಗಳಿರುವ ಇದರ ಹಾಲು ಅಮೃತಕ್ಕೆ ಸಮ ಎಂದು ವೇದಗಳಲ್ಲಿ ಉಲ್ಲೇಖವಿರುವುದನ್ನೂ ಕಾಣಬಹುದು, ಜತೆಗೆ ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ ಎಂದು ಹೇಳಿದರು.
ಜೀರ್ಣೋದ್ದಾರ ಸಮಿತಿ ಸಂಚಾಲಕ ರವಿ ಕಾವೂರ್, ಸದಸ್ಯರಾದ ಸಂತೋಷ್ ಕಾವೂರು,ಯತೀಶ್ ಕುಮಾರ್ ಉಪಸ್ಥಿತರಿದ್ದರು.