ವಿಶೇಷ ಕಾರ್ಯಪಡೆ ಸಿಬ್ಬಂದಿಗೆ ತುಳು ಕಲಿಕಾ ಶಿಬಿರ: ಸುಧೀರ್ ಕುಮಾರ್
ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶೇಷ ಕಾರ್ಯಪಡೆ ಮಂಗಳೂರು ವತಿಯಿಂದ ವಿಶೇಷ ಕಾರ್ಯಪಡೆ ಸಿಬ್ಬಂದಿಗಾಗಿ ಆಯೋಜಿಸಲಾಗಿರುವ 20 ದಿನಗಳ ತುಳು ಕಲಿಕಾ ಶಿಬಿರ ಮತ್ತು ಸಂಸ್ಕೃತಿ ಪರಿಚಯ ಕಾರ್ಯಾಗಾರ
ದ.ಕ ಮತ್ತು ಉಡುಪಿ ಭಾಗದಲ್ಲಿ ಸ್ಥಳೀಯ ಭಾಷೆಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಹಾಗಾಗಿ ಇಲ್ಲಿಗೆ ಕರ್ತವ್ಯಕ್ಕೆ ಬರುವ ಪೊಲೀಸರಿಗೆ ಕೆಲವೊಂದು ಸಮಸ್ಯೆಯಾಗುತ್ತದೆ. ನಾವು ನಮ್ಮವರು ಎನ್ನುವ ಭಾವನೆ ಬರುವುದಿಲ್ಲ. ಸ್ಥಳೀಯರು ಕೂಡಾ ನಮ್ಮವರು ಎಂದು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಭಾಷೆಯನ್ನು ಕಲಿಯುವು ದರಿಂದ ಸಂಸ್ಕೃತಿಯ ಪರಿಚಯವೂ ಆಗಿ, ನಾವೂ ಅವರೊಳಗೆ ಒಬ್ಬರಾಗುತ್ತೇವೆ. ಇದು ಅಪರಾಧ ತನಿಖೆಯ ಸಂದರ್ಭದಲ್ಲೂ ಇಲಾಖೆಗೆ ನೆರವಾಗುತ್ತದೆ ಎಂದರು.
ಹಿಂದೆ ಈ ಭಾಗದಲ್ಲಿ ಎಲ್ಲರೂ ಒಟ್ಟಿಗೆ ಒಂದೇ ಶಾಲೆಯಲ್ಲಿ ಕಲಿತ್ತಿದ್ದರು. ಇದರಿಂದ ಒಬ್ಬರ ಭಾಷೆಯನ್ನು ಇನ್ನೊಬ್ಬ ರಿಗೆ ಕಲಿಯಲು ಅವಕಾಶವಾಗುತ್ತಿತ್ತು. ತುಳು, ಬ್ಯಾರಿ, ಕೊಂಕಣಿ ಹೀಗೆ ಎಲ್ಲ ಭಾಷೆಗಳು ಎಲ್ಲರಿಗೂ ಗೊತ್ತಿತ್ತು. ಪ್ರಸ್ತುತ ಜಾತಿ, ಧರ್ಮದ ಶಿಕ್ಷಣ ಸಂಸ್ಥೆಗಳು ರಚನೆಯಾಗಿ, ಆಯಾ ಧರ್ಮ, ಜಾತಿಯವರು ಮಾತ್ರ ಅಲ್ಲಿಗೆ ಸೇರ್ಪಡೆ ಗೊಳ್ಳುತ್ತಿದ್ದಾರೆ. ಇದರಿಂದ ಇತರ ಭಾಷೆಗಳು ಅರ್ಥವಾಗದೆ ಏನು ಮಾತನಾಡಿದರೂ ಅದನ್ನು ತಪ್ಪಾಗಿ ತಿಳಿಯುವ ಪ್ರಮೇಯ ಬಂದೊದಗಿದೆ ಎಂದರು.
ಜಿಲ್ಲೆಯಲ್ಲಿ ಶೇ.98ರಷ್ಟು ಮಂದಿ ಅವರ ಪಾಡಿಗೆ ಅವರು ಇದ್ದಾರೆ. ಏನೇ ಸಮಸ್ಯೆ ಬಂದರೂ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಶೇ.2ರಲ್ಲಿ ಶೇ.1ರಷ್ಟು ಮಂದಿ ಅಪರಾಧಿಕ ಮನಸ್ಥತಿಯವರು. ಇವರು ಶೇ.98ರಷ್ಟಿರುವ ಜನರನ್ನು ಹೆದರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದ ಶೇ.1 ಪೊಲೀಸರಾಗಿದ್ದು, ಅವರು ಶೇ.98ರಷ್ಟು ಮಂದಿ ಧೈರ್ಯ ಹೇಳುವ ಕೆಲಸ ಮಾಡಬೇಕು. ಅವರಿಗೆ ಅವರದೇ ಆದ ಭಾಷೆಯಲ್ಲಿ ಹೇಳಿದರೆ ಅರ್ಥವಾಗುತ್ತದೆ. ಅವರ ನೋವು ತಿಳಿಯಬೇಕಾದರೆ ನಾವು ಅವರ ಭಾಷೆ ಕಲಿಯಬೇಕು ಎಂದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿ, ಉದ್ಘಾಟಿಸಿ, ತುಳು ಕಲಿತು ತುಳುವಿನಲ್ಲಿ ವ್ಯವಹರಿಸುವುದರಿಂದ ತುಳುವಿಗೆ ಇನ್ನಷ್ಟು ಆದ್ಯತೆ ದೊರೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ಭಾಷೆ ಕಲಿಕೆಯು ಊರಿನ ಸಾಂಸ್ಕೃತಿಕ ಬದುಕಿನ ಪರಿಚಯವನ್ನು ನೀಡುತ್ತದೆ ಎಂದರು.
ವಿಶೇಷ ಕಾರ್ಯಪಡೆ ಪ್ರಭಾರ ಪೊಲೀಸ್ ಉಪ ಅಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಕಾನೂನು ಸುವ್ಯವಸ್ಥೆ ಡಿಸಿಪಿ ಮಿಥುನ್ ಎಚ್.ಎನ್. ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಸಂಚಾಲಕ ನಾಗೇಶ್ ಉದ್ಯಾವರ ಕಾರ್ಯನಿರೂಪಿಸಿದರು. ಎಎಸ್‌ಎಫ್ ಸಿಬ್ಬಂದಿ ರವಿಪ್ರಕಾಶ್ ಸ್ವಾಗತಿಸಿ, ವಂದಿಸಿದರು.