ಮಂಗಳೂರು ಪಾಲಿಕೆ: ಜನನ, ಮರಣ ಪತ್ರಕ್ಕಾಗಿ ಸರತಿ ಸಾಲು-ಪರದಾಟ
ಮಂಗಳೂರು ನಗರ ವ್ಯಾಪ್ತಿಯಲ್ಲಿ ಮನೆ ಮನೆ ಆರ್ಥಿಕ ಸಾಮಾಜಿಕ ಸಮೀಕ್ಷೆ ಕಾರ್ಯ ಇತ್ತೀಚೆಗೆ ನಡೆದಿತ್ತು. ಇದರಲ್ಲಿ ಶಿಕ್ಷಕರು ಸಹಿತ ಪಾಲಿಕೆಯ ಸಿಬಂದಿಯೂ ಭಾಗವಹಿಸಿದ್ದರು. ಪಾಲಿಕೆಯ ಡಾಟಾ ಎಂಟ್ರಿ ಆಪರೇಟರ್ ಗಳು, ಕಿರಿಯ ಎಂಜಿನಿಯರ್ ಗಳು ಸಹಿತ ಪಾಲಿಕೆಯ ಹಲವು ಸಿಬಂದಿಗಳು ಇದರಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಕಳೆದ ಹಲವು ದಿನಗಳಿಂದ ಜನನ-ಮರಣ ಪ್ರಮಾಣ ಪತ್ರ ಪಡೆಯುವ ಕೌಂಟರ್ ಸಿಬಂದಿ ಇಲ್ಲದೆ ಬಂದ್ ಆಗಿತ್ತು. ಈ ಸೇವೆ ವ್ಯತ್ಯಯವಾಗಿತ್ತು. ಹೀಗಾಗಿ ಅರ್ಜಿ ಸಲ್ಲಿಸಲು ಬಂದ ಜನರು ಕೌಂಟರ್ ಬಂದ್ ಆದ ಹಿನ್ನೆಲೆಯಲ್ಲಿ ವಾಪಾಸಾಗಿದ್ದರು.
ಮಂಗಳವಾರದಿಂದ ಸಿಬಂದಿ ಪಾಲಿಕೆ ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವವರ ಕ್ಯೂ ದೊಡ್ಡದಿತ್ತು. ಒಂದೇ ದಿನ ಸುಮಾರು 300ಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಗುರುವಾರವೂ ಇಷ್ಟೇ ಸಂಖ್ಯೆಯಲ್ಲಿ ಸಾರ್ವಜನಿ ಕರು ಆಗಮಿಸಿದ ಕಾರಣದಿಂದ ಕ್ಯೂ ಪಾಲಿಕೆ ಮುಂಭಾಗದವರೆಗೆ ಇತ್ತು.
‘ನಾನು ಸುಮಾರು ಮುಕ್ಕಾಲು ಗಂಟೆಯಿಂದ ಸರತಿಯಲ್ಲಿ ಕಾಯುತ್ತಿದ್ದೇನೆ. ನನ್ನಂತೆಯೇ ಅದೆಷ್ಟೋ ಜನರು ತಮ್ಮ ಕೆಲಸ ಬಿಟ್ಟು ಇದಕ್ಕಾಗಿ ಆಗಮಿಸಿದ್ದಾರೆ. ಆದರೆ ಇಲ್ಲಿ ಕ್ಯೂ ನಿಂತು ನಿಂತು ಸಾಕಾಗಿದೆ. ಅಧಿಕಾರಿಗಳು ಸಾರ್ವಜನಿ ಕರಿಗೆ ಪೂರಕ ಮಾಹಿತಿಯನ್ನೇ ನೀಡುತ್ತಿಲ್ಲ. ಸಾರ್ವಜನಿಕರ ಸಮಸ್ಯೆ ಕೇಳುವವರೇ ಇಲ್ಲ ಎಂದು ಅರ್ಜಿದಾರರೊಬ್ಬರು ದೂರಿದರು.
ಜನನ-ಮರಣ ಪ್ರಮಾಣ ಪತ್ರ ಪಡೆಯುವಲ್ಲಿ ಸಾರ್ವಜನಿಕರು ಗಂಟೆಗಟ್ಟಲೆ ಕಾದು ಸಂಕಟ ಎದುರಿಸುತ್ತಿದ್ದ ವಿಷಯ ತಿಳಿದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಅಧಿಕಾರಿ/ಸಿಬಂದಿ ಜತೆಗೆ ಚರ್ಚೆ ನಡೆಸಿದರು. ಜನನ/ಮರಣ ನೋಂದಣಿಯನ್ನು ಕಂಪ್ಯೂಟರ್ ನಲ್ಲಿಯೇ ನೋಂದಣಿ ಮಾಡಬೇಕಾಗುತ್ತದೆ. ಕಾಗದದ ಮೂಲಕ ನೀಡಲು ನಿಯಮದಲ್ಲಿ ಅವಕಾಶ ಇಲ್ಲ. ಜತೆಗೆ ಸರ್ವರ್ ಸಮಸ್ಯೆ ಕೂಡ ಇದೆ ಎಂಬ ಮಾಹಿತಿ ಪಡೆದ ಐವನ್ ಡಿಸೋಜಾ, ಜನರು ಹೊರಭಾಗದಲ್ಲಿ ತಾಸುಗಟ್ಟಲೆ ಕ್ಯೂ ನಿಲ್ಲುವ ಬದಲು ದಿನಕ್ಕೆ ಇಂತಿಷ್ಟು ಎಂಬಂತೆ ಟೋಕನ್ ವ್ಯವಸ್ಥೆ ಕಲ್ಪಿಸಿ ಅವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.