ಹೊಸ ಸಚಿವ ಸಂಪುಟವೂ ಆಗಬಹುದು: ದಿನೇಶ್ ಗುಂಡೂರಾವ್

ಹೊಸ ಸಚಿವ ಸಂಪುಟವೂ ಆಗಬಹುದು: ದಿನೇಶ್ ಗುಂಡೂರಾವ್


ಮಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ ಏನನ್ನೂ ಹೇಳಿಲ್ಲ. ಸಚಿವ ಸಂಪುಟ ಪುನರ್ರಚನೆ ಯಾವಾಗ ಬೇಕಾದರೂ ಆಗಬಹುದು ಅಥವಾ ಹೊಸ ಸಚಿವ ಸಂಪುಟವೂ ಆಗಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಸೋಮವಾರ ಔತಣ ಕೂಟಕ್ಕೆ ಕರೆದಿದ್ದಾರೆ. ನನ್ನನ್ನೂ ಬರಬೇಕು ಎಂದು ಕರೆದಿದ್ದಾರೆ. ಅಲ್ಲಿ ಏನಾಗುತ್ತೋ ನೋಡೋಣ ಎಂದರು.

ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಈಗ ಮುಖ್ಯಮಂತ್ರಿ ಇದ್ದಾರೆ. ಪಕ್ಷದ ಹೈಕಮಾಂಡ್, ಹಿರಿಯ ಮುಖಂಡರು ನಿರ್ಧಾರ ಕೈಗೊಳ್ಳಲಿದ್ದಾರೆ. ಅವರ ತೀರ್ಮಾನ ಅಂತಿಮ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ನಾಯಕ ಹಾಗೂ ಜನಪ್ರಿಯ ನಾಯಕ ಎಂದರು.

ಡಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್ ಅವರು ದೀರ್ಘಕಾಲದಿಂದ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದು, ಪ್ರಸ್ತುತ ಮೆಸ್ಕಾಂ ಅಧ್ಯಕ್ಷರಾಗಿದ್ದಾರೆ. ಈ ಬಗ್ಗೆ ಪಕ್ಷದ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಸ್ವಲ್ಪಮಟ್ಟಿನ ಷಡ್ಯಂತ್ರ...

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಯಾವುದೇ ಹಸ್ತಕ್ಷೇಪ ಇಲ್ಲದೆ, ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ. ಯಾವುದೇ ಒತ್ತಡಕ್ಕೆ ಮಣಿಯಬೇಕಿಲ್ಲ. ನನಗೆ ಎಸ್‌ಐಟಿ ಬಗ್ಗೆ ಪೂರ್ತಿ ವಿಶ್ವಾಸವಿದೆ. ನನಗಿರುವ ಮಾಹಿತಿಯಂತೆ ಸ್ವಲ್ಪಮಟ್ಟಿನ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಯಾವ ಸಾಕ್ಷ್ಯ ಇದೆ ಎಂಬುದನ್ನು ಎಸ್‌ಐಟಿ ಹೇಳಬೇಕಿದೆ. ಅಗತ್ಯವಿದ್ದರೆ ಎಸ್‌ಐಟಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article