‘ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡುವ ಅರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ’: ಎಂ.ಜಿ. ಹೆಗಡೆ ಪ್ರಶ್ನೆ
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಪ್ರೇಮದ ಬಗ್ಗೆ ಕಾಂಗ್ರೆಸ್ಗೆ ಹೇಳುವ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದೇ ಇಲ್ಲ ಎಂದು ಆರೋಪಿಸಿದರು.
ಬ್ರಿಟಿಷ್ ಆಡಳಿತವಿದ್ದಾಗ 1940ರಲ್ಲಿ ಯಾವುದೇ ಸಂಘಟನೆಗಳು ಪ್ಯಾರಾ ಮಿಲಿಟರಿ ಸಮವಸ್ತ್ರ ಬಳಕೆ, ಮಿಲಿಟರಿ ಕವಾಯತು ಮಾಡುವುದನ್ನು ನಿರ್ಬಂಧ ಮಾಡಲಾಗಿತ್ತು. ಈ ರೀತಿ ಚಟುವಟಿಕೆ ಮಾಡಲು ಪರವಾನಿಗೆ ಪಡೆಯ ಬೇಕು ಎಂಬ ಆದೇಶ ಹೊರಡಿಸಲಾಗಿತ್ತು. ಜತೆಗೆ ಸರಕಾರಿ ನೌಕರರು ಆರ್ಎಸ್ಎಸ್ ನಲ್ಲಿ ಭಾಗವಹಿಸದಂತೆಯೂ ಆದೇಶ ಮಾಡಲಾಗಿತ್ತು. ಅಂದಿನ ಆರ್ಎಸ್ಎಸ್ ಸರ ಸಂಘಚಾಲಕ ಎಂ.ಎಸ್. ಗೋಳ್ವಾಲಕರ್ ಬ್ರಿಟಿಷ್ ಸರಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುವುದಾಗಿ ಬರೆದು ಕೊಟ್ಟಿದ್ದರು. ಅಲ್ಲದೆ ಆದೇಶವನ್ನು ಆರ್ಎಸ್ಎಸ್ ಪಾಲಿಸುತ್ತಿರುವ ಬಗ್ಗೆ ಅಂದಿನ ಬಾಂಬೆ ಸರಕಾರದ ಗೃಹ ಇಲಾಖೆಯ ಸಿಐಡಿ ವಿಭಾಗ 1942ರಲ್ಲಿ ವರದಿ ನೀಡಿತ್ತು ಎಂದು ಎಂಜಿ ಹೆಗಡೆ ವರದಿಯ ದಾಖಲೆಯನ್ನು ತೋರಿಸಿದರು.
ಅಂದಿನ ಸಿಐಡಿ ವರದಿಯಲ್ಲಿ ಆರ್ಎಸ್ಎಸ್ ಪ್ರಬಲವಾಗಿದ್ದು ಬಾಂಬೆ ಪ್ರಾಂತದ 19 ಜಿಲ್ಲೆಗಳಲ್ಲಿನ ಆರೆಸ್ಸೆಸ್ ಚಟುವಟಿಕೆಯ ಸಮಗ್ರ ಚಿತ್ರಣವಿದೆ. ಭಾರತದಲ್ಲಿ ಕ್ವಿಟ್ ಇಂಡಿಯಾ ಚಳವಳಿ, ಸುಭಾಶ್ಚಂದ್ರ ಬೋಸ್ ಅವರ ಹೋರಾಟ, ಭಾರ ವಿಭಜನೆ ಚಿಂತನೆ ಮೊದಲಾದ ಹೋರಾಟಗಳಿಂದ ದೇಶ ಹೊತ್ತು ಉರಿಯುತ್ತಿದ್ದರೆ, ಆರೆಸ್ಸೆಸ್ ತನಗೇನೂ ಸಂಬಂಧ ಇಲ್ಲ ಎಂಬ ರೀತಿಯಲಿ ತನ್ನ ಶಾಖೆ, ಕಾರ್ಯಕ್ರಮಗಳನ್ನು ಮಾಡಿಕೊಂಡು ಬ್ರಿಟಿಷರ ಎಲ್ಲಾ ನಿಯಮಗಳಿಗೂ ಸಂಪೂರ್ಣ ಶರಣಾಗಿತ್ತು ಎಂಬ ವಿಚಾರ 90 ಪುಟುಗಳ ಅಂದಿನ ರಹಸ್ಯ ದಾಖಲೆಯಲ್ಲಿದೆ ಎಂದವರು ಹೇಳಿದರು.
ಬ್ರಿಟಿಷರ ಆಡಳಿತವಿದ್ದಾಗ ಅವರ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಆರೆಸ್ಸೆಸ್ ಈಗ ದೇಶದ ಕಾನೂನನ್ನು ಯಾಕೆ ಪಾಲಿಸುತ್ತಿಲ್ಲ? ಪ್ರಸಕ್ತ ಬೇರೆ ದೇಶಗಳಲ್ಲಿಯೂ ಕಾನೂನು ಪಾಲಿಸಿಕೊಂಡು ಚಟುವಟಿಕೆ ನಡೆಸುವ ಆರೆಸ್ಸೆಸ್ ದೇಶದಲ್ಲಿ ಮಾತ್ರ ಕಾನೂನು ಪಾಲನೆಗೆ ಹಿಂದೇಟು ಹಾಕುವುದೇಕೆ ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರಕ್ಕೆ ಸೇರಿದ ಅಂಚೆ ಕಚೇರಿ, ವಿಮಾನ ನಿಲ್ದಾಣ ಮೊದಲಾದ ಕಡೆಗಳಲ್ಲಿ ಆರೆಸ್ಸೆಸ್ನ ಚಟುವಟಿಕೆ ಗಳನ್ನು ನಡೆಸಲು ನಾಗರಿಕ ಸಮಾಜ ಒಪ್ಪಿಗೆ ನೀಡುವುದೇ ಎಂದು ಪ್ರಶ್ನಿಸಿದ ಅವರು, ಬ್ರಿಟಿಷರ ಕಾಲದಲ್ಲಿಯೂ ಇಲ್ಲಿನ ಸಾಮಾಜಿಕ ಸಮಸ್ಯೆಗಳಾದ ಅಸ್ಪಶ್ಯತೆ, ಬಡತನ, ಆರೆಸ್ಸೆಸ್ಗೆ ಬೇಕಾಗಿರಲಿಲ್ಲ. ಸಂಘದ ಶಾಖೆ, ಭಾಷಣಗಳಲ್ಲಿ ಈ ಕುರಿತು ಕಾರ್ಯಕ್ರಮ ಮಾಡುತ್ತಿದ್ದ ಬಗ್ಗೆ ಯಾವುದೇ ದಾಖಲೆ ಸಿಐಡಿ ವರದಿಯಲ್ಲಿ ಸಿಗುವುದಿಲ್ಲ ಎಂದವರು ಹೇಳಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ಚಟುವಟಿಕೆಯಲ್ಲಿ ಪಾಲ್ಗೊಂಡ ಇಬ್ಬರು ಅಧಿಕಾರಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆರೆಸ್ಸೆಸ್ ಪರವಾಗಿ ಪೋಸ್ಟ್ ಹಾಕುವ ಸರಕಾರಿ ನೌಕರರ ವಿರುದ್ದ ಕ್ರಮದ ಬಗ್ಗೆಯೂ ಪಕ್ಷದ ಗಮನ ಸೆಳೆಯುವುದಾಗಿ ಹೇಳಿದರು.
ರಾಜ್ಯ ಮಹಿಳಾ ಕಾರ್ಯದರ್ಶಿ ಮಂಜುಳಾ ನಾಯಕ್, ದ.ಕ ಜಿಲ್ಲೆ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಶಿಕಲಾ ಪದ್ಮನಾಭ, ಹಿಂದುಳಿದ ವರ್ಗದ ಉಪಾಧ್ಯಕ್ಷ ಉದಯ ಆಚಾರ್, ಪ್ರಕಾಶ್ ಸಾಲಿಯಾನ್, ಶಶಿಕಲಾ, ಸುನಿಲ್ ಬಜಿಲಕೇರಿ, ಸಜೀತ್ ಶೆಟ್ಟಿ, ರವಿ ಪೂಜಾರಿ, ಮಿಥುನ್ ಕುಮಾರ್ ಉಪಸ್ಥಿತರಿದ್ದರು.