ಅಶೋಕ ಜನಮನ ಕಾರ್ಯಕ್ರಮದ ಬಗ್ಗೆ ಅಪಪ್ರಚಾರ ನಾಚಿಕೆಗೇಡು: ಕಾವು ಹೇಮನಾಥ ಶೆಟ್ಟಿ ಆರೋಪ
ಪುತ್ತೂರು: ಪುತ್ತೂರಿನಲ್ಲಿ ನಡೆದ ಅಭೂತಪೂರ್ವ ಅಶೋಕ ಜನಮನ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳೇ ಶ್ಲಾಘಿಸಿದ್ದು, ಈ ಕಾರ್ಯಕ್ರಮದ ಬಗ್ಗೆ ಪುತ್ತೂರಿನ ಮಾಜಿ ಶಾಸಕರು ಮತ್ತು ಬಿಜೆಪಿ ಅಧ್ಯಕ್ಷರು ಸುಳ್ಳು ಹೇಳಿಕೆ ನೀಡುತ್ತಾ ಅಪಪ್ರಚಾರ ನಡೆಸಿದ್ದು ನಾಚಿಗೆಗೇಡಿನ ವಿಚಾರ. ಮಾತನಾಡಿದರೆ ಜನ ಒಪ್ಪುವಂತಹ ಮಾತುಗಳನ್ನಾಡಬೇಕು. ಮಾತಿನಲ್ಲಿ ಸತ್ಯಾಂಶ ಇರಬೇಕು. ಮಾಜಿ ಶಾಸಕರು ಮತ್ತು ಬಿಜೆಪಿ ಮಂಡಲದ ಅಧ್ಯಕ್ಷರು ಮಾಡಿರುವ ಸುಳ್ಳು ಆರೋಪ ಅವರ ವ್ಯಕ್ತಿತ್ವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆರೋಪಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಶಾಸಕರ ಮೇಲಿನ ಪ್ರೀತಿಯಿಂದಾಗಿ ಅಶೋಕ ಜನಮನಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ರಾಜ್ಯದ ಪಂಚ ಗ್ಯಾರೆಂಟಿ, ಶಾಸಕರ ಪುತ್ತೂರಿನ ಅಭಿವೃದ್ಧಿ ಕಾರ್ಯಕ್ರಮದಿಂದ ಜನ ಬದಲಾವಣೆ ಆಗುತ್ತಿದ್ದಾರೆ. ಇದರಿಂದಾಗಿ ವಿಚಲಿತರಾಗಿರುವ ಮಾಜಿ ಶಾಸಕರು ಮತ್ತು ಬಿಜೆಪಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಮೋಸ ಆಗಿದೆ, ಆಸ್ಪತ್ರೆಗೆ ಹೋಗಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಸಮಸ್ಯೆ ಆಗಿರುವುದು ನಿಜ. ಆದರೆ ಟ್ರಸ್ಟ್‌ನ ಮೂಲಕ ಅವರಿಗೆ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಹಿನ್ನಲೆಯಲ್ಲಿ ನಿರೀಕ್ಷೆಗೂ ಮೀರಿ ಜನರು ಭಾಗವಹಿಸಿದ್ದರು. ಅಲ್ಲದೆ ವಿಪರೀತ ಮಳೆಯ ಕಾರಣದಿಂದಾಗಿ ಸ್ಪಲ್ಪ ಮಟ್ಟಿಗೆ ತೊಂದರೆಯಾಗಿತ್ತು. ಅದನ್ನೇ ದೊಡ್ಡದು ಮಾಡುವ ಬದಲಿಗೆ ಟೀಕಿಸುವವರು ಸಂಘಟಕರ ಶ್ರಮವನ್ನು ಗಮನಿಸಬೇಕಿತ್ತು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಕೇವಲ 37 ಸಾವಿರ ಮತ ಪಡೆದಿದೆ. ಮುಂದಿನ ಚುನಾವಣೆಯಲ್ಲಿ ಅವರು ಇಡುಗಂಟನ್ನು ಕೂಡಾ ಕಳೆದುಕೊಳ್ಳುವ ಪರಿಸ್ಥಿತಿಯಿದೆ. ಅವರು ಅದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಒಳ್ಳೆಯ ಕೆಲಸ ಮಾಡುತ್ತಿರುವ ಶಾಸಕರ ಕುರಿತು ಮಾತನಾಡುವುದುನ್ನು ಈ ಸಮಾಜ ಒಪ್ಪುವುದಿಲ್ಲ. ಹೀಗೇ ಹೇಳಿಕೆ ನೀಡುತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ನಿಮ್ಮ ಇಡುಗಂಟು ಕೂಡಾ ನಿಮಗೆ ಸಿಗುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕರು ತಮ್ಮ ಆರೋಪದಲ್ಲಿ ಕಾರ್ಯಕ್ರಮದಲ್ಲಿ 15 ಸಾವಿರ ಚಯರ್ ಮಾತ್ರ ಇದ್ದಿರುವುದಾಗಿ ಹೇಳಿದ್ದಾರೆ. ಆದರೆ ಮಾಜಿ ಶಾಸಕರಿಗೆ ಎಷ್ಟು ಜನ ಸೇರಿದ್ದಾರೆಂಬುದು ಹೇಗೆ ಗೊತ್ತು. ನಮ್ಮ ನಿರೀಕ್ಷೆ 1 ಲಕ್ಷ ಜನ. ಆದರೆ 1 ಲಕ್ಷಕ್ಕೂ ಮಿಕ್ಕಿ ಜನ ಬಂದಿದ್ದಾರೆ. ಬೆಳಗ್ಗೆ ಗಂಟೆ 9 ರಿಂದ ರಾತ್ರಿ ಗಂಟೆ 10 ಗಂಟೆಯ ತನಕ ಜನಸಾಗರ ಬಂದು ಹೋಗುತ್ತಿತ್ತು. ಪುತ್ತೂರು ಪೇಟೆಯಲ್ಲಿಂದಲೇ ಜನಸಾಗರ ಇತ್ತು. ಒಮ್ಮೆ ಕೂತುಕೊಂಡವನ್ನು ಲೆಕ್ಕ ಹಾಕವುದು ಸರಿಯಲ್ಲ. 1 ಲಕ್ಷ ಜನ ಸೇರಿಸಿ ಭಾಷಣ ಮಾಡುವುದು ಅಲ್ಲ. ಬೆಳಗ್ಗಿನಿಂದ ರಾತ್ರಿಯ ತನಕ ಬಂದವರಿಗೆ ಉಡುಗೊರೆ ಕೊಡುವ ಕಾರ್ಯಕ್ರಮವಾಗಿದೆ. ಶಾಸಕರು ಈ ಮೊದಲೇ ಇಂತಹ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಯಾರಲ್ಲೂ ಕಲೆಕ್ಷನ್ ಮಾಡಿಲ್ಲ. ಅವರ ಸಂಪಾದನೆಯ ಒಂದಾಂಶವನ್ನು ಸಮಾಜಕ್ಕೆ ಕೊಟ್ಟಿದ್ದಾರೆ. ಅದಕ್ಕೆ ಹೊಟ್ಟೆನೋವು ಯಾಕೆ? ವಿರೋಧ ಮಾಡುವವರು, ಟೀಕಿಸುವವರು ನಿಮ್ಮ ಯೋಗ್ಯತೆಗೆ 1 ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡಲಿ. ಏನಾದರು ಉಚಿತ ಉಡುಗೊರೆ ಕೊಡಲಿ ನೋಡೋಣ ಎಂದ ಅವರು ಬಿಜೆಪಿಯವರು ಇಷ್ಟು ವರ್ಷ ಏನಾದರೂ ಕೊಟ್ಟದ್ದು ಉಂಟಾ? ಎಂದು ಕಾವು ಹೇಮನಾಥ ಶೆಟ್ಟಿ ಪ್ರಶ್ನಿಸಿದರು.
ಸುದ್ಧಿಗೋಷ್ಟಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಲ್ಯಾನ್ಸಿಮಸ್ಕರೇನಸ್, ಅನ್ವರ್ ಖಾಸಿಂ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರಿತ್ ಕಣ್ಣರಾಯ ಉಪಸ್ಥಿತರಿದ್ದರು.