ಕಲ್ಲು, ಮರಳು ಗಣಿಗಾರಿಕೆ ಆರಂಭ: ನಿಗಾ ವಹಿಸಿರುವ ಕಂದಾಯ, ಪೊಲೀಸ್ ಇಲಾಖೆ
ಮಂಗಳೂರು: ಈಗಾಗಲೇ ಪ್ರಾರಂಭವಾಗಿರುವ ಕೆಂಪು ಕಲ್ಲು, ಮರಳು ಗಣಿಗಾರಿಕೆಯ ಬಗ್ಗೆ ನಿಗಾವಹಿಸಲು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಕೆಂಪು ಕಲ್ಲು ಸಾಗಾಟದ ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ಅವರು ಉಳಾಯಿಬೆಟ್ಟುವಿನ ಕಲ್ಲಿನ ಕೋರೆಗೆ ಶುಕ್ರವಾರ ತೆರಳಿ ಪರಿಶೀಲನೆ ನಡೆಸಿದರು. ನೀರು ಮಾರ್ಗದಲ್ಲಿ ಕಲ್ಲು ಸಾಗಾಟದ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದರು.
ಸರಕಾರಕ್ಕೆ ಪಾವತಿಸಬೇಕಾದ ರಾಜಸ್ವವನ್ನು ಪಾವತಿಸಿ ಕಲ್ಲು, ಮರಳು ಗಣಿಗಾರಿಕೆಯನ್ನು ನಡೆಸಲು ಪರವಾನಿಗೆಯನ್ನು ಪಡೆದಿರುವ ಪರವಾನಿಗೆದಾರರು ಸಾರ್ವಜನಿಕರಿಂದ ಹೆಚ್ಚಿನ ದರ ಪಡೆಯದಂತೆ ಎಚ್ಚರ ವಹಿಸಲಾಗುತ್ತಿದೆ. ಕಲ್ಲು ಮರಳು ಸಾಗಾಟವಾಗುವ ವಾಹನಗಳಲ್ಲಿ ಹೆಚ್ಚಿನ ತೂಕ (ಓವರ್‌ಲೋಡ್) ಪರಿಶೀಲಿಸುವುದು, ಪ್ರತಿದಿನಕ್ಕೆ ಪಡೆಯುವ ಪರವಾನಿಗೆಯನ್ನು ದುರುಪಯೋಗಪಡಿಸಿದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.
ಮುಂಜಾನೆಯಿಂದ ತಡರಾತ್ರಿವರೆಗೂ ಪರಿಶೀಲನೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಉಪ ತಹಶೀಲ್ದಾರರು, ಗ್ರಾಮ ಸಹಾಯಕರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.