ಸಂಶಯ ಮೂಡಿಸಿರುವ ಚುನಾವಣಾ ಆಯೋಗದ ಕ್ರಮ

ಸಂಶಯ ಮೂಡಿಸಿರುವ ಚುನಾವಣಾ ಆಯೋಗದ ಕ್ರಮ

ಮಂಗಳೂರು: ಜಿಲ್ಲೆಯ ಪ್ರತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಪ್ರಸ್ತುತ ಚಾಲ್ತಿಯಲ್ಲಿರುವ 2025ರ ಅಂತಿಮ ಪಟ್ಟಿಯೊಂದಿಗೆ ತಾಳೆ ನೋಡಿ ಪರಿಶೀಲಿಸಲು ಜಿಲ್ಲಾಹೆಚ್ಚುವರಿ ಚುನಾವಣಾಧಿಕಾರಿ, ಅಪರ ಜಿಲ್ಲಾಧಿಕಾರಿಯವರು ಆದೇಶಿಸಿದಂತೆ ಮ್ಯಾಪಿಂಗ್ ಮಾಡುವ ಕೆಲಸಗಳು ನಡೆಯುತ್ತಿದೆ. ಬಿಎಲ್‌ಒಗಳ ಮೂಲಕ ಈ ಕೆಲಸ ಮಾಡಿಸುತ್ತಿರುವ ಚುನಾವಣ ಆಯೋಗದ ಕ್ರಮ ಸಂಶಯ ಉಂಟು ಮಾಡುತ್ತಿದ್ದು, ಇದರ ಹಿಂದಿನ ಉದ್ದೇಶವೇನು ಎಂದು ಚುನಾವಣ ಆಯೋಗ ಜನತೆಗೆ ತಿಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಮಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ (ಗ್ರಾಮಾಂತರ ಜಿಲ್ಲೆ) ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ರಾಜಕೀಯ ಪಕ್ಷಕ್ಕೆ ಹಾಗೂ ರಾಜಕೀಯ ಪಕ್ಷದ ಬಿಎಲ್‌ಎಗಳಿಗೆ ಯಾವುದೇ ಮಾಹಿತಿ ನೀಡದೆ ಚುನಾವಣ ಆಯೋಗ ಈ ಕೆಲಸಕ್ಕೆ ಕೈ ಹಾಕಿದೆ. 2022ರ ಅನಂತರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ವರ್ಷಕ್ಕೆ ನಾಲ್ಕು ಬಾರಿಯಂತೆ ನಡೆಸಲಾಗಿದೆ. ಈ ಹಿಂದೆ ಪ್ರತಿ ವರ್ಷ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಇನ್ನಿತರ ಯಾವುದೇ ಕೆಲಸವಿರಲಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಕರೆದು ಅವರಿಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ ಈ ನಡೆಯುತ್ತಿರುವ ಮತದಾರರ ಪಟ್ಟಿಯ ಮ್ಯಾಪಿಂಗ್ ಕೆಲಸಕ್ಕೆ ಆದೇಶಿಸುವ ಮೊದಲು ಯಾವುದೇ ಮಾಹಿತಿ ನೀಡಿಲ್ಲ ಎಂದವರು ಆರೋಪಿಸಿದರು.

2008ರಲ್ಲಿ ವಿಧಾನಸಭಾ ಕ್ಷೇತ್ರ ಮರುವಿಂಗಡನೆಯಾಗಿದ್ದು, 2002ರ ನಂತರ ಪ್ರತಿ ವರ್ಷ ಸಂಕ್ಷಿಪ್ತ ಪರಿಷ್ಕರಣೆ ಮಾಡಲಾಗಿದೆ. ತಾಳೆ ನೋಡಿ ಪರಿಶೀಲಿಸಲು ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡುತ್ತಿಲ್ಲ, ಬದಲಿಗೆ 2002ರ ಓಟರ್ ಲಿಸ್ಟ್ ಮತ್ತು 2025ರ ಓಟರ್ ಲಿಸ್ಟ್ ನೋಡಿ ಮ್ಯಾಪಿಂಗ್ ಮಾಡುತ್ತಿದ್ದಾರೆ ಇದರಿಂದ ಸರಿಯಾಗಿ ಪರಿಷ್ಕರಣೆ ಆಗಲು ಹೇಗೆ ಸಾಧ್ಯ? 2002ರ ಮತದಾರರ ಪಟ್ಟಿಗೂ 2025ರ ಅಂತಿಮ ಮತದಾರರ ಪಟ್ಟಿಯಲ್ಲಿರುವ ಹೆಸರುಗಳಿಗೆ ತಾಳೆ ಬಾರದಿದ್ದರೆ ಅಂತಹ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆದರೆ ಅವರ ಮತದ ಹಕ್ಕನ್ನು ಕಸಿದಂತೆ ಅಲ್ಲವೇ? ಎಂದು ಪ್ರಶ್ನಿಸಿದರು.

ಒಂದು ವೇಳೆ ಚುನಾವಣ ಆಯೋಗಕ್ಕೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಬಗ್ಗೆ ಪ್ರಾಮಾಣಿಕ ಉದ್ದೇಶವಿದ್ದರೆ 2002ರಲ್ಲಿ ನಡೆದಂತೆ ಮನೆ ಮನೆಗೆ ಭೇಟಿ ನೀಡಿ ಅರ್ಹ ಮತದಾರನ್ನು ಸೇರಿಸಿ ಮತದಾರರ ಪಟ್ಟಿ ತಯಾರಿಸಬೇಕು ಎಂದು ಆಗ್ರಹಿಸಿದರು.

ನಗರ ಜಿಲ್ಲೆ ಪ್ರಚಾರ ಸಮಿತಿ ಅಧ್ಯಕ್ಷ ಡೆನ್ನಿಸ್ ಡಿ‘ಸಿಲ್ವಾ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ ಸಾಲ್ಯಾನ್, ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಕೆ.ಪಿ. ಥಾಮಸ್, ಜಿಲ್ಲಾ ಉಪಾಧ್ಯಕ್ಷ ಹೊನ್ನಯ್ಯ ಟಿ., ಸೇವಾದಳದ ನಾಯಕ ಉದಯ ಕುಂದರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article