ರೌಡಿಶೀಟರ್ ಟೋಪಿ ನೌಫಾಲ್ ಕೊಲೆಯಲ್ಲ
ಶನಿವಾರ ಬೆಳಗ್ಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿಯಲ್ಲಿ ನೌಫಾಲ್ ಮೃತದೇಹ ಲಭಿಸಿತ್ತು. ನೌಫಾಲ್ ಮಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದುದರಿಂದ ಯಾರೋ ಮಾತುಕತೆಗೆ ಕರೆದು ಕೊಲೆ ಮಾಡಿದ್ದಾರೆಂದು ಮಾಹಿತಿ ಲಭಿಸಿತ್ತು. ಕುತ್ತಿಗೆ, ತಲೆಯಲ್ಲಿ ರಕ್ತ ಜಿನುಗಿದ್ದು ಹೊಡೆದು ಹಾಕಿದ ರೀತಿಯ ಕಲೆಗಳಿದ್ದುದರಿಂದ ಯಾರೋ ಹತ್ಯೆ ಮಾಡಿದ್ದಿರಬಹುದೆಂಬ ಶಂಕೆಗಳಿದ್ದವು. ಆದರೆ ಕಾಸರಗೋಡು ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರು ತಲವಾರಿನಿಂದ ಕಡಿದು ಆಗಿರುವ ಗಾಯಗಳಲ್ಲ. ಬದಲಿಗೆ ರೈಲು ಢಿಕ್ಕಿ ಹೊಡೆದು ಆಗಿರುವ ಗಾಯಗಳೆಂದು ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಮಂಜೇಶ್ವರ ಪೊಲೀಸರು ನೌಫಾಲ್ ಆಪ್ತರು ಮತ್ತು ಅಂದು ಮೊಬೈಲ್ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ನೌಫಾಲ್ ತೀವ್ರ ರೀತಿಯ ಡ್ರಗ್ಸ್ ವ್ಯಸನಿಯಾಗಿದ್ದು ಸಿರಿಂಜ್ ಗಳಲ್ಲಿ ಡ್ರಗ್ಸ್ ಸೇವನೆ ಮಾಡದೇ ಇದ್ದರೆ ಹಾಗೇ ಉಳಿದುಕೊಳ್ಳುವುದೇ ಸಾಧ್ಯ ಇಲ್ಲ ಎನ್ನುವಷ್ಟರ ಮಟ್ಟಿಗೆ ತಲುಪಿದ್ದ. ಶುಕ್ರವಾರ ಸಂಜೆ ಮಂಗಳೂರಿನಲ್ಲಿ ತನ್ನ ಆಪ್ತರ ಜೊತೆಗಿದ್ದ ನೌಫಾಲ್ ಅದೇ ದಿನ ರಾತ್ರಿ ತನ್ನ ಸ್ಕೂಟರಿನಲ್ಲಿ ಉಪ್ಪಳಕ್ಕೆ ತೆರಳಿರುವುದು ಸಿಸಿಟಿವಿ ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ಮೃತದೇಹದ ಜೊತೆಗಿದ್ದ ಪ್ಯಾಂಟ್ ಕಿಸೆಯಲ್ಲೂ ಸಿರಿಂಜ್‌ಗಳಿದ್ದವು ಎನ್ನುವ ಮಾಹಿತಿ ಇದೆ.
ಉಪ್ಪಳ ಗೇಟ್ ಬಳಿ ತಡರಾತ್ರಿ ಡ್ರಗ್ಸ್ ಪಡೆದಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದು ಡ್ರಗ್ಸ್ ತಲುಪಿಸಿದ್ದು ಯಾರೆನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಡ್ರಗ್ಸ್ ಪಡೆದ ಬಳಿಕ ರೈಲ್ವೇ ಹಳಿಯಲ್ಲೇ ಕುಳಿತಿದ್ದನೇ ಅಥವಾ ಅಮಲಿನಲ್ಲಿ ನಿಂತುಕೊಂಡಿದ್ದಾಗಲೇ ರೈಲು ಬಡಿದು ಹೋಗಿದೆಯಾ ಎನ್ನುವುದು ಖಚಿತವಾಗಿಲ್ಲ. ಈ ಅಂಶಗಳನ್ನು ಆಧರಿಸಿ ಮಂಜೇಶ್ವರ ಪೊಲೀಸರು ನೌಫಾಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುತ್ತಿದ್ದಾರೆ. ಆದರೆ ನೌಫಾಲ್ ಸಾವಿಗೆ ಶರಣಾಗುವಷ್ಟು ಅಧೀರನಾಗಿರಲಿಲ್ಲ. ರೈಲು ಬಡಿದು ಆಕಸ್ಮಿಕ ಮೃತಪಟ್ಟಿರಬಹುದು ಎಂದು ಮಂಗಳೂರು ಪೊಲೀಸರು ಹೇಳುತ್ತಿದ್ದಾರೆ.