ಮನು ಇಡ್ಯಾ ತುಳುವಿನ ಯುಗ ಪ್ರವರ್ತಕ ನಾಟಕಕಾರ: ಯು.ಕೆ. ಕುಮಾರನಾಥ

ಮನು ಇಡ್ಯಾ ತುಳುವಿನ ಯುಗ ಪ್ರವರ್ತಕ ನಾಟಕಕಾರ: ಯು.ಕೆ. ಕುಮಾರನಾಥ


ಮಂಗಳೂರು: ಎಪ್ಪತ್ತರ ದಶಕದ ಬಳಿಕ ತುಳು ರಂಗಭೂಮಿಯ ದಿಕ್ಕು ಬದಲಾಯಿಸಿದ ಯುಗ ಪ್ರವರ್ತಕ ನಾಟಕಕಾರ ಮನು ಇಡ್ಯಾರ ತುಳು ರಂಗಭೂಮಿಯ ಕೊಡುಗೆ ಅಪೂರ್ವದದು ಎಂದು ವಿಜಯ ಕರ್ನಾಟಕ ಪತ್ರಿಕೆಯ ನಿವೃತ್ತ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಇಡ್ಯಾ ಸುರತ್ಕಲ್ ಬಿಲ್ಲವ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಅಕಾಡೆಮಿ ಪ್ರಕಟಿಸಿರುವ ಮನು ಇಡ್ಯಾರ ‘ಗಂಧದ ಕೊರಡ್’ ಮತ್ತು ‘ತಾಂಗ್ ನಿರೆಲ್’ ನಾಟಕ ಪುಸ್ತಕ ಬಿಡುಗಡೆ ಮತ್ತು ಮನು ಇಡ್ಯಾರಿಗೆ ಚಾವಡಿ ತಮ್ಮನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತುಳು ರಂಗಭೂಮಿಗೆ ಹೊಸ ಅಲೆಯ ನಾಟಕಗಳನ್ನು ನೀಡಿದ ಮನು ಇಡ್ಯಾರ ನಾಟಕಗಳ ಅಧ್ಯಯನ ಮತ್ತು ಪ್ರದರ್ಶನಗಳು ನಡೆಯುವ ಅಗತ್ಯವಿದೆ ಎಂದರು.

ಚಾವಡಿ ತಮ್ಮನದ ಅಭಿನಂದನಾ ನುಡಿಗಳನ್ನು ಆಡಿದ ಹಿರಿಯ ರಂಗ ನಟಿ ಗೀತಾ ಸುರತ್ಕಲ್ ಅವರು, ಮನು ಇಡ್ಯಾರ ನಾಟಕಗಳ ವಸ್ತು ದೇಸಿಯತನದಿಂದ ಕೂಡಿದ್ದು ಭಾಷೆಯ ಪ್ರೌಡಿಮೆ, ವಿಶಿಷ್ಟ ರಂಗ ನಡೆಯನ್ನು ಹೊಂದಿದೆ, ಇಡ್ಯಾ ಅವರ ಎಲ್ಲಾ ನಾಟಕಗಳು ಪ್ರಕಟವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಆಧುನಿಕ ತುಳು ನಾಟಕ ರಂಗದಲ್ಲಿ ಅಮೃತ ಸೋಮೇಶ್ವರ ಅವರ ಬಳಿಕ ಮನು ಇಡ್ಯಾ ಅವರು ಶ್ರೇಷ್ಠ ನಾಟಕಗಳನ್ನು ಕೊಟ್ಟವರು, ಮನು ಇಡ್ಯಾ ಅವರ ಒಂದೆರಡು ನಾಟಕಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.

ಸಿಂಗಾರ ಸುರತ್ಕಲ್ ಕಲಾ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಕೃಷ್ಣಮೂರ್ತಿ, ಇಡ್ಯಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷೆ ಯಮುನಾ ಶೇಖರ್ ಶುಭ ಹಾರೈಸಿದರು.

ಸುಶೀಲ ಮನು ಇಡ್ಯಾ ಉಪಸ್ಥಿತರಿದ್ದರು.

ಅಕಾಡೆಮಿಯ ಸದಸ್ಯ ಸಂಚಾಲಕ ಮತ್ತು ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ನಾರಾಯಣ ಗುರು ಮಂದಿರ ಮತ್ತು ವಿಠೋಭ ರುಕುಮಾಯಿ ದೇಗುಲದ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಚಂದ್ರಶೇಖರ ನಾನಿಲ್ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್ ಅಭಿನಂದನಾ ಪತ್ರ ವಾಚಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಮಧುಸೂದನ ಇಡ್ಯಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article