ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ-ಮಾರಾಟಮೇಳ ಸಂಪನ್ನ

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ-ಮಾರಾಟಮೇಳ ಸಂಪನ್ನ

ಆಧುನಿಕತೆಗೆ ಹೊಂದಿಕೊಳ್ಳುತ್ತ ಮೂಲಗಳನ್ನು ಮರೆಯದಿರಿ: ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರು ಇಲ್ಲಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ನವಕರ್ನಾಟಕ ಪ್ರಕಾಶನ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025ರ ಅಂಗವಾಗಿ ಐದು ದಿನಗಳ ಪುಸ್ತಕ ಪ್ರದರ್ಶನ-ಮಾರಾಟಮೇಳ ನ.3 ರಂದು ಕಾಲೇಜಿನ ಸಿಲ್ವರ್ ಜುಬಿಲಿ ಸ್ಮಾರಕ ಸಭಾಂಗಣದಲ್ಲಿ ಉದ್ಘಾಟನೆಗೊಂಡು ನ.7 ರಂದು ಸಮಾರೋಪ ಸಮಾರಂಭದೊಂದಿಗೆ ಸಂಪನ್ನವಾಯಿತು.

ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ವಹಿಸಿದ್ದರು. ನವಕರ್ನಾಟಕ ಪ್ರಕಾಶನ, ಮಂಗಳೂರು ಶಾಖೆಯ ಪ್ರತಿನಿಧಿಗಳಾದ ಸುರೇಶ್ ಹಾಗೂ ವಿಜಯಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ಮಾತನಾಡಿ, ‘ಪುಸ್ತಕ ಪ್ರದರ್ಶನ ಮತ್ತು ಮಾರಾಟಮೇಳಗಳು ಓದು, ಅರಿವು ಮತ್ತು ಪ್ರೇರಣೆಯ ಉತ್ಸವಗಳು. ಆಧುನಿಕತೆಗೆ ಒಗ್ಗೊಳ್ಳುತ್ತ ಮೊಬೈಲ್ ಸ್ಕ್ರೀನ್‌ಗಳಿಗೆ ದಾಸರಾಗುತ್ತಿರುವ ಕಾಲದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆಧುನಿಕತೆಗೆ ಹೊಂದಿಕೊಳ್ಳುತ್ತ ಜ್ಞಾನದ ಮೂಲಗಳಾದ ಪುಸ್ತಕಗಳನ್ನು ಮರೆಯಬೇಡಿ. ಪುಸ್ತಕ ಓದುವಿಕೆಯ ಅನುಭವವನ್ನು ಆನಂದಿಸಿ, ಜೀವನಕ್ಕೆ ಅಳವಡಿಸಿಕೊಳ್ಳಿ’ ಎಂದು ಹೇಳಿದರು.

ನವಕರ್ನಾಟಕ ಪ್ರಕಾಶನದ ಪ್ರತಿನಿಧಿ ಶ್ರೀ ಸುರೇಶ್ ಮಾತನಾಡಿ, ‘ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ ಐದು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಇಂದಿನ ಕಾಲಘಟ್ಟದಲ್ಲಿ ಕಾಲೇಜುಗಳಲ್ಲಿ ಈ ರೀತಿಯ ಪ್ರದರ್ಶನಗಳು ಅತ್ಯಂತ ಅಗತ್ಯ. ಕಾಲೇಜಿನ ಸಹಕಾರದಿಂದ ಈ ಮೇಳ ಯಶಸ್ವಿಯಾಯಿತು. ಈ ಐದು ದಿನಗಳು ಸಾಹಿತ್ಯಾಸಕ್ತರ ಪರಿಚಯ ಮತ್ತು ಆತಿಥ್ಯ ಸಂತೋಷ ನೀಡಿತು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ, ವಿಜ್ಞಾನ, ವಾಣಿಜ್ಯ ನಿರ್ವಹಣೆ, ತಂತ್ರಜ್ಞಾನ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಸುಮಾರು 8,000 ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಹೆಚ್ಚಿನ ಸಂಖ್ಯೆಯ ಪುಸ್ತಕಗಳು ಮಾರಾಟವಾದವು.

ಪುಸ್ತಕ ಪ್ರದರ್ಶನಕ್ಕೆ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರಾದ ಪ್ರೊ. ರಾಮಕೃಷ್ಣ ಪೆರ್ವಾಜೆ, ಪ್ರೊ. ಎಸ್.ಐ. ಭಟ್, ಪ್ರೊ. ವಿಷ್ಣು ಭಟ್, ಪ್ರೊ. ಎ.ಪಿ. ರಾಧಾಕೃಷ್ಣ, ಪ್ರೊ. ಗಣೇಶ್ ಭಟ್, ಪ್ರೊ. ಕೃಷ್ಣ ಕುಮಾರ್, ನಿವೃತ್ತ ಉಪನ್ಯಾಸಕರಾದ ಪ್ರೊ. ಹರಿನಾರಾಯಣ ಮಾಡಾವು, ಡಾ. ಪ್ರಸನ್ನ ರೈ, ಪ್ರೊ. ಸುಬೈರ್, ವಿವೇಕಾನಂದ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕರಾದ ಪ್ರೊ. ವಿ.ಬಿ. ಅರ್ತಿಕಜೆ, ಸಾಹಿತಿಗಳಾದ ಐ.ಕೆ. ಬೊಲ್ವಾರ್, ಸರಕಾರಿ ಮಹಿಳಾ ಕಾಲೇಜು, ಪುತ್ತೂರು ಗ್ರಂಥಪಾಲಕರಾದ ಡಾ. ರವಿಚಂದ್ರ, ವಕೀಲರಾದ ಸೂರ್ಯ ನಾರಾಯಣ ಎನ್.ಕೆ., ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಂಥಾಲಯ ಸಲಹಾ ಸಮಿತಿ ಸದಸ್ಯರು, ವಿದ್ಯಾರ್ಥಿ ಪರಿಷತ್ ಪ್ರತಿನಿಧಿಗಳು, ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 3,000 ಸಾಹಿತ್ಯಾಸಕ್ತರು ಮತ್ತು ಪುಸ್ತಕಪ್ರೇಮಿಗಳು ಭೇಟಿ ನೀಡಿದರು.

ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮಣಿ ಅವರು ನಿರ್ವಹಿಸಿದರು.

ಕಾಲೇಜಿನ ಮುಖ್ಯ ಗ್ರಂಥಪಾಲಕ ಅಬ್ದುಲ್ ರಹ್ಮಾನ್ ಜಿ. ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕರಾದ ಮನೋಹರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article