ಮುದ ನೀಡುವ ಮಂಜು-ಚಳಿ: ಗ್ರಾಮೀಣ ಭಾಗದಲ್ಲಿ ಚುಮು ಚುಮು ಚಳಿ, ಮಂಜು ಮುತ್ತಿದ ಚಿಲ್ ಚಿಲ್ ಹವಾ..!
ಬೆಳಗ್ಗೆ 6 ಗಂಟೆಯಿಂದಲೇ ಮಂಜು ಇದ್ದು 7ರ ಸುಮಾರಿಗೆ ದಟ್ಟವಾಗಿ ಹರಡುತ್ತದೆ. ಸುತ್ತಲೂ ಬಿಳಿ ಮಂಜು ಆವರಿಸಿ ಪರಿಸರವಿಡೀ ಹಾಲ್ನೊರೆ ಸುರಿದಂತೆ ಭಾಸವಾಗುತ್ತಿತ್ತು. ಸುಮಾರು ಎರಡು ತಾಸು ಇದೇ ವಾತಾವರಣ ಮುಂದುವರಿದಿತ್ತು. ಬೆಳಗ್ಗೆ ವಾಕಿಂಗ್, ಜಾಗಿಂಗ್ ಹೋಗಿದ್ದ ಮಂದಿ ದಟ್ಟ ಮಂಜು ಕವಿದ ವಾತಾವರಣದ ಮಜಾ ಅನುಭವಿಸಿದರು.
ಹಳವು ತಿಂಗಳ ಕಾಲ ಮಳೆಯ, ಮೋಡದ ವಾತಾವರಣ ಇದ್ದು ಇದೀಗ ಮಂಜು ಆವರಿಸಿ ಪರಿಸರವಿಡೀ ಅಪರೂಪದ ದೃಶ್ಯ ಕಾವ್ಯ ಸೃಷ್ಠಿಯನ್ನು ಕಣ್ತುಂಬಿಕೊಂಡು ಪುಳಕಿತರಾಗುತ್ತಾರೆ. ಬದಲಾದ
ವಾತಾವರಣದಿಂದ ಬೆಳಗ್ಗೆ ಸುಳ್ಯ ಸುಂದರವಾಗಿ ಕಾಣುತ್ತಿತ್ತು. ನಸುಕಿನ ವೇಳೆ ಇಡೀ ಸುಳ್ಯ ಮಂಜಿನ ನಗರಿಯಾಗಿ ಮಾರ್ಪಾಡಾಗಿತ್ತು. ಮುಂಜಾನೆಯ ಮಂಜು ವಿಶೇಷ ಅನುಭವವನ್ನು ನೀಡಿತ್ತು ಎಂದು ವಾಕಿಂಗ್ ಮಾಡುತ್ತಿದ್ದ ಮಂದಿ ಅನುಭವ ಹಂಚಿಕೊಂಡರು.
ಸುಳ್ಯ ಹಾಗೂ ಪರಿಸರದಲ್ಲಿ ಕೆಲವು ದಿನಗಳಿಂದ ಒಣ ಹವೆ ಮತ್ತು ಬೆಳಗ್ಗಿನ ಜಾವ ಸ್ವಲ್ಪ ಚಳಿಯ ವಾತಾವರಣ ಇದೆ.ಸುಳ್ಯ ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಗಡಿ ಗ್ರಾಮಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಒಂದೆರಡು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಚುಮು ಚುಮು ಚಳಿಯ ಅನುಭವ ಉಂಟಾಗುತ್ತಿದೆ. ಕೆಲವೆಡೆ ಸಣ್ಣ ಮಟ್ಟಿನ ಮಳೆಯೂ ಸುರಿದಿದೆ. ಬೆಳಗ್ಗೆ ಮಂಜು, ಹಗಲು ಸೆಕೆ, ಸಂಜೆಯ ವೇಳೆ ಮೋಡ ಸಣ್ಣ ಮಳೆ.. ಹೀಗೆ ಕೆಲವು ದಿನ ಹವಾಮಾನದಲ್ಲಿ ವೈವಿಧ್ಯತೆ ಮೇಳೈಸಿದೆ.
