ಡ್ರಗ್ಸ್ ಹೊಂದಿದ್ದ ಕಾಸರಗೋಡು ನಿವಾಸಿ ಬಂಧನ
ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ನೆಹರೂನಗರ ಅಂಡರ್ ಪಾಸ್ ಬಳಿ ವ್ಯಕ್ತಿಯೊಬ್ಬ ಮಾದಕ ದ್ರವ್ಯ ಸಹಿತ ಬಂಟ್ವಾಳ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಮತ್ತವರ ಸಿಬ್ಬಂದಿಗಳು ಶುಕ್ರವಾರ ಸಂಜೆ ಗಸ್ತಿನಲ್ಲಿದ್ದಾಗ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರೂನಗರ ಅಂಡರ್ ಪಾಸ್‌ನ ಬಳಿ ತಲುಪಿದಾಗ ಅಂಡರ್ ಪಾಸ್ ಪಕ್ಕ ಮಣ್ಣು ರಸ್ತೆಯ ಬಳಿ ಒಬ್ಬಾತ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದ.
ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಾಸರಗೋಡಿನ ಅಬ್ದುಲ್ ನಾಸೀರ್ (28) ಎಂದು ಹೇಳಿದ್ದು, ಮತ್ತಷ್ಟು ವಿಚಾರಣೆ ನಡೆಸಿದಾಗ ಉತ್ತರಿಸಲು ತಡವರಿಸಿದ್ದು, ಕೂಲಂಕಷವಾಗಿ ಅತನನ್ನು ತಪಾಸಣೆಗೊಳಪಡಿಸಿದಾಗ ಆರೋಪಿ ಜೊತೆ ಮೆಥ್ ಡ್ರಗ್ಸ್ ಇದ್ದು, ಇದರ ಸೇವನೆಗಾಗಿ ಜನವಿರಳ ಸ್ಥಳಕ್ಕೆ ಬಂದಿರುವುದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
ಮತ್ತಷ್ಟು ತಪಾಸಣೆಗೊಳಪಡಿಸಿದಾಗ ಆರೋಪಿ ಧರಿಸಿದ್ದ ಜೀನ್ಸ್ ಪ್ಯಾಂಟಿನ ಎಡ ಜೇಬಿನಿಂದ 3 ಪ್ಲಾಸ್ಟಿಕ್ ಪೊಟ್ಟಣ ಪತ್ತೆಯಾಗಿದ್ದು, ಅದರಲ್ಲಿ ಸಕ್ಕರೆಯಂತೆ ಕಾಣುವ ಪದಾರ್ಥ ಇದ್ದು ಸೊತ್ತಿನ ಬಗ್ಗೆ ವಿಚಾರಿಸಿದಾಗ ಒಟ್ಟು 1.02 ಗ್ರಾಂ.ನ ಸುಮಾರು 1000 ರೂ. ಮೌಲ್ಯದ ನಿದ್ರಾಜನಕ ಮೆಥ್ ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಪಡಿಸಿದ್ದಾರೆ. ಆರೋಪಿ ಅಬ್ದುಲ್ ನಾಸೀರ್‌ನನ್ನು ಬಂಧಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.