ಲಾರಿ ಚಲಾಯಿಸುತ್ತಿರುವಾಗಲೇ ಚಾಲಕನ ಸಾವು
Tuesday, December 30, 2025
ಕುಂದಾಪುರ: ಲಾರಿ ಚಲಾಯಿಸುತ್ತಿದ್ದಾಗಲೇ ತೀವ್ರ ಹೃದಯಾಘಾತಕ್ಕೊಳ ಗಾಗಿ ಚಾಲಕ ಮೃತಪಟ್ಟ ಘಟನೆ ಭಾನುವಾರ ಇಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ರವಿಪ್ರಕಾಶ್ (46) ಮೃತ ಲಾರಿ ಚಾಲಕ ಎಂದು ಗುರುತಿಸಲಾಗಿದೆ.
ಉಡುಪಿಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಲಾರಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಗಮ್ ಜಂಕ್ಷನ್ ಸಮೀಪ ಬರುತ್ತಿರುವಂತೆ ನಿಧಾನವಾಗಿ ಚಲಿಸತೊಡಗಿತು. ಚಾಲಕನ ನಿಯಂತ್ರಣ ಕಳೆದುಕೊಂಡು ಅಲ್ಲೇ ಇದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ನಂತರ ಡಿವೈಡರ್ ಬಳಿಯ ಸಿಸಿಟಿವಿ ಕ್ಯಾಮೆರಾ ಕಂಬಕ್ಕೆ ಗುದ್ದಿ ನಿಂತಿದೆ.
ಸ್ಥಳೀಯರು ಹೋಗಿ ನೋಡುವಾಗ ಚಾಲಕ ಅಸ್ವಸ್ಥಗೊಂಡಿರುವುದು ಕಂಡು ಬಂದಿದೆ. ಬಾಯಲ್ಲಿ ನೊರೆ ಬರುತ್ತಿತ್ತು. ಕೂಡಲೆ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಆಗಲೇ ಮೃತ ಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ಘೋಷಿಸಿದ್ದಾರೆ.
ಲಾರಿ ಚಲಾಯಿಸುವಾಗ ಹೃದಯಾಘಾತವಾಗಿ ಅವರು ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.