ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮ

ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮ


ಮಂಗಳೂರು: ಮಂಗಳೂರಿನ ಶಕ್ತಿ ನಗರದಲ್ಲಿರುವ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮವು ಡಿಸೆಂಬರ್ 13ರಂದು ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆಯಿತು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಅವರು ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 


ಬಳಿಕ ಅವರು ಮಾತನಾಡಿ, ನಮ್ಮಲ್ಲಿರುವ ಸರ್ಟಿಫಿಕೇಟ್‌ಗಳು ಕೇವಲ ನೋಡೋಕ್ಕೆ ಮಾತ್ರ ಚಂದ, ಆದರೆ ನಮ್ಮ ನಿಜವಾದ ಪರಿಚಯ ಆಗೋದು ನಮ್ಮ ವ್ಯಕ್ತಿತ್ವದಲ್ಲಿ. ಹೆತ್ತವರಾದವರು ತಮ್ಮ ಮಗುವಿಗೆ ಈ ಸಮಾಜದಲ್ಲಿರುವ ಬೇರೆ ಯಾರದೋ ಉದಾಹರಣೆ ನೀಡಿ ನೀನು ಅವರ ಹಾಗೇ ಆಗಬೇಕು ಎಂದು ಹೇಳುವ ಬದಲಾಗಿ ಮಗನೇ ನೀನು ನನ್ನನ್ನು ನೋಡಿ ಕಲಿ, ನನ್ನ ಹಾಗೇ ಆಗು ಅಂತ ಹೇಳುವಷ್ಟು ಧೈರ್ಯ, ಆತ್ಮವಿಶ್ವಾಸ ಹೆತ್ತವರಲ್ಲಿ ಇರಬೇಕು ಎಂದು ಹೇಳಿದರು.


ಮಗುವಿಗೆ ಹೆತ್ತವರ ಸ್ಪರ್ಶ ತುಂಬಾನೇ ಮುಖ್ಯ, ಮಗು ಎಷ್ಟು ದೊಡ್ಡದಾಗಿದ್ರು ಹೆತ್ತವರು ಮಗುವಿಗೆ ಕೊಡುವ ಪ್ರೀತಿಯನ್ನು ಕಡಿಮೆ ಮಾಡಬಾರದು. ಒಂದು ಮಗುವಿಗೆ ಎಲ್ಲಿ ಹೆತ್ತವರ ಪ್ರೀತಿ ಕಡಿಮೆಯಾಗುತ್ತೋ ಅಲ್ಲಿ ಆ ಮಗು ಬಾಹ್ಯ ಪ್ರೀತಿಗೆ, ಆಕರ್ಷಣೆಗೆ ಒಳಗಾಗುತ್ತದೆ.ಹಾಗಾಗಿ ಕಡ್ಡಾಯವಾಗಿ ಹೆತ್ತವರು ತಮ್ಮ ಮಗುವಿನೊಂದಿಗೆ ಕನಿಷ್ಠ 30 ರಿಂದ 45 ನಿಮಿಷದವರೆಗೆ ಆದರೂ ಮನಸ್ಸು ಬಿಚ್ಚಿ ಮಾತನಾಡಲು ಸಮಯವನ್ನು ನೀಡಬೇಕು ಎಂದ ಅವರು ಬಂದಿರುವ ತಾಯಂದಿರಿಗೆ ಬೇರೆ ಚಟುವಟಿಕೆಗಳನ್ನು ಮಾಡುವ ಮೂಲಕ ತಮ್ಮೊಳಗೆ ಇರುವ ಶಕ್ತಿ ಸಾಮರ್ಥ್ಯವನ್ನು ಜಾಗೃತಗೊಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮಾತನಾಡಿ, ಎಳೆವೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ನೀಡಿದರೆ ಅದು ಜೀವನದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಒಂದು ಮಗು ಬೆಳೆದು ಒಬ್ಬ ಒಳ್ಳೆಯ ವ್ಯಕ್ತಿಯಾಗುವಲ್ಲಿ ಅಮ್ಮನ ಪಾತ್ರ ಎಷ್ಟು ಮಹತ್ತರವಾದದ್ದು ಎನ್ನುವುದು ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ ಅರ್ಥ ಮಾಡಿಸಬೇಕು ಎಂದು ಹೇಳಿದರು. 

ಮುಖ್ಯ ಅತಿಥಿಗಳಾದ ಆಶಾ ಬೆಳ್ಳಾರೆ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ತಮ್ಮ ತಾಯಂದಿರಿಗೆ ಪಾದಪೂಜೆಯನ್ನು ಮಾಡುವ ಮೂಲಕ ಆಶೀರ್ವಾದವನ್ನು ಬೇಡಿಕೊಂಡಿರುವುದು ನೆರೆದವರಿಗೆ ಹೃದಯಸ್ಪರ್ಶಿಯಾಗಿತ್ತು. 

ಶಕ್ತಿ ವಸತಿ ಶಾಲೆಯ ಸಂಸ್ಕೃತ ಅಧ್ಯಾಪಕಿ ಸಾರಿಕಾ ಪಾದಪೂಜೆಯ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಶಿಕ್ಷಕಿ ಭವ್ಯಶ್ರೀ ಸ್ವಾಗತಿಸಿದರು, ಶಿಕ್ಷಕಿ ಪ್ರೇಮಲತಾ ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article