ಗೋ ಕಡಿದು ಹತ್ಯೆ: ಆಕ್ರೋಶ
ಮಂಗಳೂರು: ಬಜ್ಪೆ ಠಾಣೆ ವ್ಯಾಪ್ತಿಯ ಕೆಂಜಾರು ಬಳಿಯ ಪೊದೆಗಳ ಎಡೆಯಲ್ಲಿ ಹಲವಾರು ಗೋವುಗಳನ್ನು ಕಡಿದು ಹತ್ಯೆ ಮಾಡಿರುವುದು ಪತ್ತೆಯಾಗಿದ್ದು, ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಂಜಾರಿನ ಕಪಿಲಾ ಗೋಶಾಲೆಯಿಂದ ಕಳೆದ 15 ದಿನಗಳಲ್ಲಿ ಎಂಟು ಗೋವುಗಳನ್ನು ಕಳವು ಮಾಡಿರುವ ಬಗ್ಗೆ ಗೋಶಾಲೆಯ ಸಂಚಾಲಕ ಪ್ರಕಾಶ್ ಶೆಟ್ಟಿ ಬಜ್ಪೆ ಠಾಣೆಗೆ ದೂರು ನೀಡಿದ್ದರು. ಇದರಂತೆ, ಹುಡುಕಾಟ ನಡೆಸಿದಾಗ ಕೆಂಜಾರಿನಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿಗೆ ಮೀಸಲಾದ ಖಾಲಿ ಜಾಗದಲ್ಲಿ ಗೋವುಗಳನ್ನು ಹತ್ಯೆ ಮಾಡಿರುವ ಜಾಗ ಪತ್ತೆಯಾಗಿದೆ.
ಸ್ಥಳದಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನು ಕಡಿದು ಹತ್ಯೆ ಮಾಡಿರುವ ಕುರುಹು ಪತ್ತೆಯಾಗಿದೆ. ಗೋವಿನ ಕೈಕಾಲುಗಳು, ಚರ್ಮ, ಇನ್ನಿತರ ತ್ಯಾಜ್ಯಗಳನ್ನು ಪೊದೆಗಳ ಎಡೆಯಲ್ಲಿ ಎಸೆಯಲಾಗಿದ್ದು, ಸ್ಥಳದಲ್ಲಿ ಹಸಿ ಹಸಿ ರಕ್ತ ಚೆಲ್ಲಿರುವುದು ಕಂಡುಬಂದಿದೆ. ಅಲ್ಲದೆ, ಒಂದು ದನ ಮತ್ತು ಇನ್ನೊಂದು ಹೋರಿಯನ್ನು ಸ್ಥಳದಲ್ಲಿ ಕಟ್ಟಿ ಹಾಕಿರುವುದು ಪತ್ತೆಯಾಗಿದ್ದು ಪ್ರಕಾಶ್ ಶೆಟ್ಟಿ ಅದು ತಮ್ಮ ಗೋಶಾಲೆಯದ್ದೆಂದು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಬಜ್ಪೆ ಠಾಣೆ ಪೊಲೀಸರು ಪ್ರಕಾಶ್ ಶೆಟ್ಟಿ ದೂರಿನಂತೆ ಕೇಸು ದಾಖಲಿಸಿದ್ದಾರೆ. ಸ್ಥಳದಲ್ಲಿ ಕಟುಕರು ಗೋವುಗಳನ್ನು ಕದ್ದು ತಂದು ಹತ್ಯೆಗೈದು ಮಾಂಸ ಮಾಡಿ ಒಯ್ದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಬಜರಂಗದಳ ಕಾರ್ಯಕರ್ತರು ತಿಳಿಸಿದ್ದಾರೆ.