ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಕೃಷಿಕರ ಬೆಳೆ ವಿಮೆ ಅನುಪ್ಥಾನದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು: ಸತೀಶ್ ಕುಂಪಲ
ಮಂಗಳೂರು: ದೇಶದ ಬೆನ್ನೆಲುಬು, ಅನ್ನದಾತರಾದ ರೈತರ ಕಷ್ಟ, ಭವಣೆ ಗಳಿಗೆ ವಿವಿಧ ಕಾರ್ಯಕ್ರಮ, ಯೋಜನೆಗಳ ಮೂಲಕ ಉತ್ತೇಜಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಮಹತ್ವಾಕಾಂಕ್ಷೆಯ ಬೆಳೆ ವಿಮೆಯ ಪ್ರಯೋಜನವು ರೈತರಿಗೆ ದೊರಕದಿರುವುದು, ರಾಜ್ಯ ಸರ್ಕಾರದ ಅಧೀನದಲ್ಲಿರುವ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳ ಲೋಪದೋಷ ದಿಂದ ಆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯಗಳಿಂದ ಕೃಷಿಕರ ಅಪಾರ ಬೆಳೆಗಳು ನಾಶವಾಗಿ, ಫಸಲ್ ವಿಮೆಯ ಪರಿಹಾರದ ನಿರೀಕ್ಷೆಯಲ್ಲಿ ನಿರಾಳರಾಗಿದ್ದ ಕೃಷಿಕರಿಗೆ ವಿಮಾ ಕಂಪನಿಗಳು ಅಲ್ಪಮೊತ್ತದ ಪರಿಹಾರ ನೀಡಿರುವುದು ಖಂಡನೀಯ, ಅಧಿಕಾರಿಗಳು ಮರು ಪರಿಶೀಲನೆ ನಡೆಸಿ ವಿಮಾ ಕಂಪನಿಗಳಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಪ್ರಧಾನ ಮಂತ್ರಿಗಳ ಕೃಷಿಕರ ಬೆಳೆ ವಿಮೆ ಯೋಜನೆಯ ಫಲಾನುಭವಿಗಳಿಗೆ ಸೂಕ್ತ ವಾದ ಪರಿಹಾರ ಮೊತ್ತವು ರೈತರಿಗೆ ಸಿಗುವಂತಾಗ ಬೇಕಿದೆ. ಆಗಿರುವ ತಾರತಮ್ಯವನ್ನು ಸರಿಪಡಿಸಿ, ಕೃಷಿಕರಿಗೆ ನ್ಯಾಯ ದೊರಕಬೇಕೆಂದು ಸತೀಶ್ ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.