ಜ.11, 12 ರಂದು ರಾಜ್ಯ ಮಟ್ಟದ ವಿಶೇಷ ಒಲಿಂಪಿಕ್ಸ್
ಮಂಗಳೂರು: ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ 317ಡಿ. ಲಯನ್ಸ್ ಕ್ಲಬ್ ವೆಲೆನ್ಸಿಯ ಮಂಗಳೂರು ವತಿಯಿಂದ ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ, ದ.ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಿಒಡಿಪಿ ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ಜ.11 ಮತ್ತು 12ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಸ್ಪೆಷಲ್ ಒಲಂಪಿಕ್ಸ್ ನಡೆಯಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 400 ಮಂದಿ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಜ.11 ರಂದು ನೋಂದಣಿ ಪ್ರಕ್ರಿಯೆಗಳು ನಡೆಯಲಿದ್ದು, ಜ.12ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಯಾಗಿ ಲಯನ್ಸ್ ಜಿಲ್ಲಾ ಗವರ್ನರ್ ಅರವಿಂದ ಶೆಣೈ, ಯುವ ಸಬಲೀಕರಣ ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ ಅಧ್ಯಕ್ಷೆ ಶಶಿಕಲಾ ಜೊಲ್ಲೆ, ಸಿಒಡಿಪಿ ನಿರ್ದೇಶಕ ಫಾ. ವಿನ್ಸೆಂಟ್ ಡಿಸೋಜ, ವಾಲ್ಟರ್ ನಂದಳಿಕೆ ಮೊದಲಾದವರು ಭಾಗವಹಿಸಲಿದ್ದಾರೆ. ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗಣ್ಯರು ಪಾಲ್ಗೊಳ್ಳುವರು ಎಂದು ಕ್ರೀಡಾ ಕೂಟದ ಸಂಚಾಲಕ ಮತ್ತು ಜಿಲ್ಲಾ ಸಂಯೋಜಕ ಲೆಸ್ಲಿ ಪಿಂಟೊ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಪೆಷಲ್ ಒಲಿಂಪಿಕ್ಸ್ ರಾಜ್ಯ ಕ್ರೀಡಾ ಸಂಚಾಲಕ ನಾರಾಯಣ ಶೇರಿಗಾರ್, ಲಯನ್ಸ್ ಕ್ಲಬ್ ವೆಲೆನ್ಸಿಯ ಅಧ್ಯಕ್ಷೆ ವಲ್ಸಾ ಜೀವನ್, ಪ್ರಮುಖರಾದ ಜೆರೋಮ್ ಕ್ಯಾಸ್ತಲಿನೋ, ಸಿರಿಲ್ ಜೀವನ್, ಸುಮಲತಾ ಎನ್.ಸುವರ್ಣ, ಪ್ರಶಾಂತ್ ಕೆ. ಉಪಸ್ಥಿತರಿದ್ದರು.