ಶಾಸಕಿಗೆ ಅವಹೇಳನ: 48 ಗಂಟೆಯೊಳಗೆ ಆರೋಪಿ ಬಂಧನಕ್ಕೆ ಆಗ್ರಹ
ಮಂಗಳೂರು: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಬರೆದಿರುವ ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿಯನ್ನು ಮುಂದಿನ ೪೮ ಗಂಟೆಯೊಳಗೆ ಬಂಧಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಎಚ್ಚರಿಸಿದೆ.
ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಅವಹೇಳನ ಮಾಡಿರುವುದು ಖಂಡನೀಯ. ಶಾಸಕರು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ರೀತಿ ಹಗುರವಾಗಿ, ಅವಮಾನಕಾರಿಯಾಗಿ ಪೋಸ್ಟ್ ಮಾಡಲಾಗಿದೆ. ಶಾಸಕರು ಬೇರೆ ಸಮುದಾಯದವರು ಆಗಿದ್ದರೆ ದುಷ್ಕರ್ಮಿ ಇಂತಹ ಪೋಸ್ಟ್ ಮಾಡುತ್ತಿದ್ದನೇ? ದಕ್ಷಿಣ ಕನ್ನಡ ಪೊಲೀಸರು ತಕ್ಷಣ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಽಸಬೇಕು ಎಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ಪ್ರಸಾದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಘಟನೆಗೆ ಸಂಬಂಧಿಸಿ ಸಮುದಾಯದೊಳಗೆ ಭಾರೀ ಆಕ್ರೋಶ ವ್ಯಕ್ತಗೊಂಡಿದೆ. ಸಮಾಜದಲ್ಲೂ ಸಾಕಷ್ಟು ಮಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ಜತೆ ಆದಿದ್ರಾವಿಡ ಸಮಾಜ ಇದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗೆ ದೂರು ನೀಡಲಾಗುವುದು. ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಽಸದಿದ್ದರೆ ನಮ್ಮ ಸಂಘದ ನೇತೃತ್ವದಲ್ಲಿ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅನಿವಾರ್ಯವಾದರೆ ಹೋರಾಟವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ರಾಜ್ಯ ಗೌರವ ಸಲಹೆಗಾರ ಅನಿಲ್ ಕಂಕನಾಡಿ, ರಾಜ್ಯ ಜತೆ ಕಾರ್ಯದರ್ಶಿ ಸುರೇಶ್ ಪಿ.ಬಿ., ಮೂಡುಬಿದಿರೆ ತಾಲೂಕು ಅಧ್ಯಕ್ಷ ಶಿವರಾಮ್ ಅನಡ್ಕ, ಬಂಟ್ವಾಳ ತಾಲೂಕು ಅಧ್ಯಕ್ಷ ಸಂತೋಷ್ ಭಂಡಾರಿಬೆಟ್ಟು ಉಪಸ್ಥಿತರಿದ್ದರು.