ಎಲೆಕ್ಟ್ರಿಕ್ ಆಟೋ: ಡಿಸಿ ಆದೇಶ ಜಾರಿಗೆ ಒತ್ತಾಯ
ಮಂಗಳೂರು: ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು 2025ರ ಡಿಸೆಂಬರ್ 6ರಂದು ಹೊರಡಿಸಿದ ಆದೇಶವನ್ನು ತಕ್ಷಣ ಕಾರ್ಯಗತಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟ ಮಂಗಳೂರು ಆಗ್ರಹಿಸಿದೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟ ಅಧ್ಯಕ್ಷ ಭರತ್ಕುಮಾರ್, ಮಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಇ ಆಟೋ ರಿಕ್ಷಾಗಳ ಸಂಖ್ಯೆ ಪ್ರಸ್ತುತ ಆಟೋ ರಿಕ್ಷಾವನ್ನೇ ನಂಬಿರುವ ಇತರ ರಿಕ್ಷಾ ಚಾಲಕರಿಗೆ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಇ ಆಟೋಗಳನ್ನು ತಡೆಗಟ್ಟಬೇಕು ಎಂದು ಒಕ್ಕೂಟದ ಮೂಲಕ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಇ ಆಟೋಗಳಿಗೆ ಸಂಬಂಧಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಕಾರ್ಯಗತಗೊಳಿಸಲು ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದೆ. ಇನ್ನು ಮುಂದೆ ಆದೇಶ ಜಾರಿಗೆ ವಿಳಂಬಿಸಿದರೆ ಇ ರಿಕ್ಷಾಗಳನ್ನು ರಿಕ್ಷಾ ಪಾರ್ಕ್ನಲ್ಲಿ ನಿಲ್ಲಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಒಕ್ಕೂಟ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮಾತನಾಡಿ, 3,500 ಇ ರಿಕ್ಷಾಗಳಿಗೆ ವಲಯ 1ರ ಹಾಗೂ ವಲಯ 2ರ ಚೌಕಾಕೃತಿಯ ಸ್ಟಿಕ್ಕರ್ನ್ನು ಬಳಿಯಬೇಕು. ಇ ರಿಕ್ಷಾ ಚಾಲಕ
ಮಂಗಳೂರು ನಗರದಲ್ಲಿ ಕನಿಷ್ಠ ಐದು ವರ್ಷದಿಂದ ವಾಸಿಸುತ್ತಿರುವ ಬಗ್ಗೆ ಕಂದಾಯ ಇಲಾಖೆಯಿಂದ ದೃಢೀಕರಣ ಮಾಡಿ ಪ್ರಮಾಣಪತ್ರ ಸಲ್ಲಿಸಬೇಕು. ಈಗಾಗಲೇ ಮಂಗಳೂರು ನಗರ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಹೊಂದಿರುವವರಿಗೆ ಇ ರಿಕ್ಷಾ ಪರವಾನಿಗೆ ಮಂಜೂರು ಮಾಡಬೇಕು. ಇ ರಿಕ್ಷಾ ಪಡೆದುಕೊಂಡಿರುವವರು ಕಡ್ಡಾಯವಾಗಿ ಚಾಲನಾ ಪರವಾನಿಗೆ ಬ್ಯಾಡ್ಜ್ ಹೊಂದಿರಬೇಕು, ಕಡ್ಡಾಯವಾಗಿ ಪರವಾನಿಗೆದಾರನೇ ಆಟೋ ರಿಕ್ಷಾ ಚಾಲನೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇ ಆಟೋಗಳೂ ಪರವಾನಿಗೆ ಪಡೆಯಬೇಕು. ಈ ಎಲ್ಲ ಅಂಶಗಳನ್ನು ಕಾರ್ಯಗತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ಉದಯಕುಮಾರ್, ಗೌರವಾಧ್ಯಕ್ಷ ಶೇಖರ್ ದೇರಳಕಟ್ಟೆ, ಗೌರವ ಸಲಹೆಗಾರ ಕೇಶವ ಶೆಟ್ಟಿ, ಕೃಷ್ಣರಾಜ್, ಕಿರಣ್ ಇದ್ದರು.