ಇ-ಖಾತಾ ವಿತರಣೆ ಸಮಸ್ಯೆಗೆ ಶೀಘ್ರ ಪರಿಹಾರ: ರವಿಚಂದ್ರ ನಾಯಕ್ ಭರವಸೆ
ಮಂಗಳೂರು: ಇ-ಖಾತಾ ವಿತರಣೆಗೆ ಸಂಬಂಧಿಸಿದ ಉಂಟಾಗಿರುವ ಸಮಸ್ಯೆಗಳನ್ನು ಆದಷ್ಟುಬೇಗ ಪರಿಹರಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಭರವಸೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿಯೂ ಗೋಕುಲ್ದಾಸ್ ಎಂಬವರು ಇ ಖಾತಾ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದರು.
ಈ ಹಿಂದೆ ಆಸ್ತಿ ಸಂಬಂಧಿತ ಸೇವೆಗಳಿಗಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ವಿನ್ಯಾಸಗೊಳಿಸಿದ ಕಸ್ಟಮ್ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ ಅನ್ನು ಬಳಸುತ್ತಿತು ರಾಜ್ಯ ಸರ್ಕಾರವು ಇತ್ತೀಚೆಗೆ ಪುರಸಭೆ ಆಡಳಿತ ಇಲಾಖೆ ಮತ್ತು ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ (ಕೆಎಂಡಿಎಸ್) ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾದ ಹೊಸ ಏಕೀಕೃತ ಸಾಫ್ಟ್ವೇರ್ ವ್ಯವಸ್ಥೆಯನ್ನು ಪರಿಚಯಿಸಿದೆ. ಹೊಸ ವ್ಯವಸ್ಥೆಗೆ ಪರಿವರ್ತನೆಯಾಗುತ್ತಿರುವ ಈ ಸಂದರ್ಭದಲ್ಲಿ ಪಾಲಿಕೆಯಲ್ಲಿ ಹೊಸ ಇ ಖಾತಾಕ್ಕೆ ದಾಖಲೆ ಅಪ್ಲೋಡ್ ಮಾಡುವಲ್ಲಿ ಮತ್ತು ವಿತರಣೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದರ ಪರಿಣಾಮವಾಗಿ ಇ-ಖಾತಾ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ. ಡಿಸೆಂಬರ್ 11 ರಿಂದ ಈ ಸಮಸ್ಯೆ ಉಂಟಾಗಿದ್ದು, ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ.
ಈ ತಿಂಗಳಲ್ಲಿ ಏಳು ಅರ್ಜಿಗಳನ್ನು ಸ್ವೀಕರಿಸಲಾಗಿದ್ದರೂ ಅವುಗಳನ್ನು ಅಪ್ಲೋಡ್ ಮಾಡಿಕೊಂಡು ಖಾತಾ ವಿತರಣೆಗೆ ಸಾಧ್ಯವಾಗುತ್ತಿಲ್ಲ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಕೆಎಂಡಿಎಸ್ ಮತ್ತು ಎನ್ಐಸಿಗೆ ವರದಿ ಮಾಡಲಾಗಿದೆ ಮತ್ತು ಸಮಸ್ಯೆಗಳನ್ನು ಸರಿಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ರಾಜ್ಯಾದ್ಯಂತ ಈ ಸಮಸ್ಯೆ ಮುಂದುವರೆದಿದೆ. ಶೀಘ್ರವೇ ಬಗೆಹರಿಸುವ ನಿರೀಕ್ಷೆ ಇದೆ ಎಂದು ಹೇಳಿದರು
ಜ.29ರಂದು ಅಧಿಕಾರಿಗಳ ಸಭೆ:
ನಗರದ ಸೈಮನ್ ಲೇನ್ನಿಂದ ಕರೆ ಮಾಡಿದ ನಿತ್ಯಾ ಎಂಬವರು ಹಲವು ಮನೆಗಳಿಗೆ ಕಳೆದ ಎರಡು ತಿಂಗಳಿನಿಂದ ನೀರು ಬರುತ್ತಿಲ್ಲ. ನೀರಿಗಾಗಿ ಖಾಸಗಿ ಟ್ಯಾಂಕರ್ಗಳನ್ನು ಅವಲಂಬಿಸುವಂತಗಿದೆ ಎಂದು ದೂರಿದರು.
ಅಧಿಕಾರಿಗಳಿಂದ ಉತ್ತರ ಪಡೆದ ಜಿಲ್ಲಾಧಿಕಾರಿ ಜಲಸಿರಿ ಯೋಜನೆಯಡಿಯಲ್ಲಿ ಹಾಕಲಾದ ನೀರು ಸರಬರಾಜು ಜಾಲಕ್ಕೆ ಸಂಪರ್ಕ ಕಲ್ಪಿಸಿ ಮೂರು ದಿನಗೊಳಗೆ ನೀರು ಪೂರೈಕೆ ಆರಂಭಿಸಲಾಗುವುದು ಎಂದರು.
ಚೊಕ್ಕಬೆಟ್ಟುವಿನ ಹಮೀದ್ ಎಂಬವರು ಕೂಡಾ ಜಲಸಿರಿಯಡಿಯಲ್ಲಿ 24*7 ನೀರು ಸರಬರಾಜು ಇದೆ ಎಂದು ಹೇಳಿಕೊಂಡರೂ, ಈ ಪ್ರದೇಶಕ್ಕೆ ಪ್ರತಿ ಮೂರು ದಿನಗಳಿಗೊಮ್ಮೆ ಮಾತ್ರ ನೀರು ಕೆಲ ಗಂಟೆ ಮಾತ್ರವೇ ಬರುತ್ತಿದೆ ಎಂದು ದೂರಿದರು.
ಎಂಸಿಸಿ ವ್ಯಾಪ್ತಿಯ ಕೆಲ ಎತ್ತರದ ಪ್ರದೇಶಗಳಿಗೆ ಒತ್ತಡದಿಂದಾಗಿ ನೀರು ಪೂರೈಕೆಯಾಗುತ್ತಿಲ್ಲ. ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಕರೆ ಮಾಡಿದವರಿಗೆ ಭರವಸೆ ನೀಡಿದ ಜಿಲ್ಲಾಧಿಕಾರಿ, ಪ್ರತಿಯೊಂದು ಮನೆಗೂ ನೀರು ಪೂರೈಕೆ ಮಾಡುವುದು ಪಾಲಿಕೆ ಕರ್ತವ್ಯವಾಗಿದ್ದು, ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಜನಸಂಖ್ಯೆಯ ಬೆಳವಣಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ಹೆಚ್ಚಳದಿಂದಾಗಿ ನೀರು ಸರಬರಾಜು ಯಾವಾಗಲೂ ಸವಾಲಾಗಿದೆ. ಈಗ, ನೀರು ಸರಬರಾಜಿನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು. ಜಿಲ್ಲೆಯಾದ್ಯಂತ ನೀರಿನ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಸಭೆ ಗುರುವಾರ ನಡೆಯಲಿದೆ ಎಂದು ಅವರು ಹೇಳಿದರು.