ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾರ್ಗದರ್ಶನದಲ್ಲಿ ಎಸ್.ಡಿ.ಎಂ ಪದವಿ ಕಾಲೇಜಿನ ಸಮ್ಯಗ್ದರ್ಶನ ಸಭಾ ಭವನದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಷನ್ ಸೊಸೈಟಿಯ ಶೈಕ್ಷಣಿಕ ಸಂಯೋಜಕ ಪ್ರೊ. ಶಶಿಶೇಖರ್ ಎನ್. ಕಾಕತ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಕ್ತಿ ಕಾಲಿನ ಹಿಂದಿ ಸಾಹಿತ್ಯವು ಧಾರ್ಮಿಕ ವೈಚಾರಿಕತೆಯನ್ನು ಮೂಡಿಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ತಿಳಿ ಹೇಳುತ್ತದೆ. ಸಾಹಿತ್ಯವು ನಮ್ಮ ಜೀವನವನ್ನು ಶಿಸ್ತಿನ ಚೌಕಟ್ಟಿನಲ್ಲಿ ಬೆಳೆಯುವಂತೆ ಮಾರ್ಗದರ್ಶನ ನೀಡುತ್ತದೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಗುಜರಾತ್ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ದಿಲೀಪ್ ಮೆಹ್ರಾ ಮಾತನಾಡಿ, ಭಕ್ತಿ ಕಾಲದ ಕುರಿತಾದ ಸಾಹಿತ್ಯ ಚಿಂತನೆಗಳು ಮಾನವೀಯ ಮೌಲ್ಯಗಳನ್ನು ಬೋಧಿಸಿ, ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ತುಳಸಿ ದಾಸ್, ಸಂತ ಕಬೀರದಾಸರಂತವರ ಸಾಹಿತ್ಯಗಳು ಪ್ರಸ್ತುತ ಸಮಾಜಕ್ಕೆ ಅನಿವಾರ್ಯವಾಗಿರುವ ಅಹಿಂಸೆ ಮತ್ತು ದಯೆಯ ನೀತಿ ಪಾಠಗಳನ್ನು ಪ್ರಚುರ ಪಡಿಸುತ್ತದೆ. ಸಾಹಿತ್ಯವು ಮಾನವೀಯ ಜೀವನಕ್ಕೆ ಮಾತ್ರ ಮಹತ್ವ ನೀಡದೆ ಈ ನೆಲದ ಪ್ರತಿಯೊಂದು ಜೀವಿಗೂ ಗೌರವ ಮತ್ತು ಪ್ರೀತಿಯನ್ನು ಹಂಚುವ ಸಂದೇಶ ಸಾರುತ್ತದೆ ಎಂದರು.
ಕಾರ್ಯಕ್ರಮದ ಅಭ್ಯಾಗತ ಪಾಂಡಿಚೇರಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಸಿ. ಜಯಶಂಕರ್ ಬಾಬು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ಸಾಹಿತ್ಯ ಅಧ್ಯಯನ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ಇದು ಹೊಸ ಹೊಸ ಸಕಾರಾತ್ಮಕ ಚಿಂತನೆಗಳನ್ನು ನಮ್ಮೊಳಗೆ ಮೂಡಿಸುತ್ತದೆ. ಮಾನವೀಯ ಪ್ರೀತಿಯನ್ನು ಬೆಳೆಸುವ ಮಹತ್ವದ ಕಾರ್ಯವನ್ನು ಸಾಹಿತ್ಯವು ಮಾಡುತ್ತದೆ ಎಂದು ನುಡಿದು ವಿಶೇಷ ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ಹಿಂದಿ ವಿಭಾಗವನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜು ಮತ್ತು ಹಿಂದಿ ವಿಭಾಗದ ವತಿಯಿಂದ ಅತಿಥಿಗಳಾದ ಗುಜರಾತ್ ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ದಿಲೀಪ್ ಮೆಹ್ರಾ, ಪಾಂಡಿಚೇರಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಸಿ. ಜಯಶಂಕರ್ ಬಾಬು, ಚೆನೈನ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಪರೀಕ್ಷಾ ನಿಯಂತ್ರಕ ಡಾ. ಸುಭಾಷ್ ಜಿ. ರಾಣೆ ರವರನ್ನು ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ್ ಪಿ ಶಾಲು ಹೊದಿಸಿ ಗೌರವಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಭಕ್ತಿ ಕಾಲದ ಹಿಂದಿ ಸಾಹಿತ್ಯದ ಪ್ರಸ್ತುತತೆಯ ವಿವಿಧ ವಿಷಯಗಳ ವಿಚಾರಗೋಷ್ಠಿಗಳಲ್ಲಿ ಜಿಲ್ಲೆಯ ಆಳ್ವಾಸ್, ವಿವೇಕಾನಂದ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಂಗಳೂರು, ಕಾರ್ಕಳ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಸಂಸ್ಥೆಗಳ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲೆ ನಂದ ಕುಮಾರಿ, ರಿಜಿಸ್ಟ್ರಾರ್ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ. ಶ್ರೀಧರ ಭಟ್, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯ್ಕ್ ಹಾಗೂ ಐಕ್ಯುಎಸಿ ಸಂಯೋಜಕ ಗಜಾನನ ಭಟ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಎನ್. ಸ್ವಾಗತಿಸಿ, ಉಪನ್ಯಾಸಕಿ ಶೃತಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.