ಹಿಂದೂ ಸಮಾಜವನ್ನು ರಕ್ಷಿಸಲು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವುದೇ ಏಕೈಕ ಪರ್ಯಾಯ: ವಿಜಯಕುಮಾರ್
ಪುತ್ತೂರಿನ ಕುಂಬ್ರದ ಶ್ರೀ ರಾಮ ಭಜನಾ ಮಂದಿರದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೌರ್ಭಾಗ್ಯವೆಂದರೆ, ಈ ಸಭೆಯನ್ನು ನಿಲ್ಲಿಸಲು ಎಸ್‌ಡಿಪಿಐ ಸಂಘಟನೆಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮತಾಂಧರ ಇಂತಹ ಸತತ ಅಡೆತಡೆಗಳು ಮತ್ತು ಸವಾಲುಗಳ ನಡುವೆಯೂ, ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ 140ಕ್ಕೂ ಹೆಚ್ಚು ಧರ್ಮಪ್ರೇಮಿಗಳು ಸಂಘಟಿತರಾಗುವ ಮೂಲಕ ಸಭೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಂಖನಾದ ಮತ್ತು ವೇದಮಂತ್ರಗಳ ಸಾತ್ತ್ವಿಕ ಪರಿಸರದಲ್ಲಿ ನಡೆದ ಈ ಕಾರ್ಯಕ್ರಮವು ಹಿಂದೂ ಸಮಾಜದ ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿತು.
ಕಾರ್ಯಕ್ರಮವನ್ನು ಲಾವಣ್ಯ ಅವರು ನಿರ್ವಹಿಸಿದರು. ಡಾ. ಪ್ರಕಾಶ್ ಪಾಟೀಲ್ ಅವರು ಸಮಿತಿಯ ಕಾರ್ಯಪರಿಚಯ ಹಾಗೂ ಸಭೆಯ ಉದ್ದೇಶವನ್ನು ವಿವರಿಸಿದರು.
ವಿಜಯ ಕುಮಾರ್ ಮಾತನಾಡಿ, ಹಿಂದೂ ರಾಷ್ಟ್ರ ಎಂದರೆ ಸತ್ವಗುಣಿ ಸಾತ್ತ್ವಿಕ ಜನರ ರಾಷ್ಟ್ರವಾಗಿದೆ. ಇದನ್ನು ವಿರೋಧಿಸುವುದು ಮತಾಂಧರ ನಿತ್ಯದ ಕೆಲಸವಾಗಿದೆ. ಕಳೆದ 20 ವರ್ಷಗಳಿಂದ ಸಮಿತಿಯು 2000ಕ್ಕೂ ಹೆಚ್ಚು ಸಭೆಗಳ ಮೂಲಕ ಲಕ್ಷಾಂತರ ಜನರಲ್ಲಿ ಧರ್ಮಜಾಗೃತಿ ಮೂಡಿಸುತ್ತಿದ್ದು, ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಸಂಕಲ್ಪದೊಂದಿಗೆ ಪ್ರತಿಯೊಬ್ಬ ಹಿಂದೂ ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲಿಡಬೇಕು ಎಂದು ಅವರು ಕರೆ ನೀಡಿದರು.
‘ಯತೋ ಧರ್ಮಸ್ತತೋ ಜಯಃ’ ಎಂಬಂತೆ ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯ ನಿಶ್ಚಿತ ಎಂದು ನುಡಿದರು. ಕೇವಲ ಜನ್ಮತಃ ಹಿಂದೂ ಎಂದು ಕರೆಸಿಕೊಳ್ಳುವುದಕ್ಕಿಂತ ನಮ್ಮ ಪ್ರತಿಯೊಂದು ಕೃತಿ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು, ಪಾಶ್ಚಾತ್ಯ ಅಂಧಾನುಕರಣೆ ಬಿಟ್ಟು ಶಾಸ್ತ್ರಬದ್ಧವಾಗಿ ಧರ್ಮಾಚರಣೆ ಮಾಡಿದಾಗ ಮಾತ್ರ ಆತ್ಮಬಲ ವೃದ್ಧಿಯಾಗಿ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ಸಂಸ್ಕೃತಿಯನ್ನು ಮರೆತ ಸಮಾಜಕ್ಕೆ ಭವಿಷ್ಯವಿಲ್ಲ, ಆದ್ದರಿಂದ ಪ್ರತಿಯೊಂದು ಹಬ್ಬ ಮತ್ತು ಸಂಪ್ರದಾಯಗಳ ಹಿಂದಿರುವ ವೈಜ್ಞಾನಿಕ ಧರ್ಮಶಾಸ್ತ್ರವನ್ನು ಅರಿತು ಶ್ರದ್ಧೆಯಿಂದ ಆಚರಿಸುವ ಮೂಲಕ ಕರ್ಮನಿಷ್ಠ ಹಿಂದೂಗಳಾಗೋಣ ಎಂದು ಅವರು ಉಪಸ್ಥಿತರಿಗೆ ಕರೆ ನೀಡಿದರು.
ಪುತ್ತೂರಿನ ಖ್ಯಾತ ವಕೀಲ ಗಿರೀಶ್ ಮಾತನಾಡಿ, ಭಾರತವು ಕೇವಲ ಹೆಸರಿಗೆ ಜಾತ್ಯತೀತ ರಾಷ್ಟ್ರವಾಗಿದ್ದು, ಇಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ, ಆದ್ದರಿಂದ ಹಿಂದೂಗಳ ಹಿತವನ್ನು ಕಾಪಾಡುವ ಹಿಂದೂ ರಾಷ್ಟ್ರ ಸ್ಥಾಪನೆಯೇ ಅಂತಿಮ ಪರಿಹಾರ ಎಂದ ಅವರು ನಾವು ಸ್ವತಃ ಧರ್ಮಾಚರಣೆ ಮಾಡಿ ಆತ್ಮಬಲ ಗಳಿಸಿದರೆ ಮಾತ್ರ ಸಮಾಜಕ್ಕೆ ಮಾರ್ಗದರ್ಶನ ನೀಡಲು ಸಾಧ್ಯ ಎಂದು ಹೇಳಿದರು.