ರಿಕ್ಷಾ ಚಾಲಕನ ಮೃತದೇಹ ಪತ್ತೆ: ತನಿಖೆ ಚುರುಕು
ನುರಿತ ಈಜುಗಾರನಾಗಿರುವ ಇರ್ಪಾನ್ ಎರಡುದಿನಗಳಿಂದ ನಾಪತ್ತೆಯಾಗಿದ್ದು, ನೀರಿಗೆ ಬಿದ್ದು ಮೃತಪಡಲು ಸಾಧ್ಯವಿಲ್ಲ ಎಂದು ಸ್ಥಳೀಯರು ಹಾಗೂ ಮನೆ ಮಂದಿ ಅನುಮಾನ ವ್ಯಕ್ತಪಡಿಸಿದ್ದು, ವ್ಯವಸ್ಥಿತವಾಗಿ ಕೊಲೆಗೈದು ನೇತ್ರಾವತಿ ನದಿನೀರಿಗೆ ಎಸೆದಿರಬೇಕಂಬ ಶಂಕೆಯನ್ನು ವ್ಯಕ್ತಪಡಿಸಿದ್ದಲ್ಲದೆ ಸಮಗ್ರ ತನಿಖೆಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಗೂಡಿನಬಳಿ ನಿವಾಸಿ ಜಿ. ಮುಹಮ್ಮದ್ ಎಂಬವರ ಪುತ್ರ ಇರ್ಫಾನ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರಿಂದ ಗುರುತು ಪತ್ತೆಹಚ್ಚಲಾಗದೆ ಬಂಟ್ವಾಳ ಸರಕಾರಿ ಆಸ್ಪತ್ರೆಯೆ ಶವಾಗಾರಕ್ಕೆ ಸಾಗಿಸಲಾಗಿತ್ತು.
ರಾತ್ರಿ ವೇಳೆ ಸ್ಥಳೀಯರು ಮೃತದೇಹದ ಗುರುತು ಪತ್ತೆ ಹಚ್ಚಿದ್ದು, ಗೂಡಿನಬಳಿ ನಿವಾಸಿ ಅಟೋ ರಿಕ್ಷಾ ಚಾಲಕ ಇರ್ಫಾನ್ ಎಂದು ಗುರುತು ಪತ್ತೆ ಹಚ್ಚಿದ್ದಾರೆ. ಮೃತ ಇರ್ಫಾನ್ ವಿವಾಹಿತನಾಗಿದ್ದು, ಮೂರು ಮಂದಿ ಮಕ್ಕಳಿದ್ದಾರೆನ್ನಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಈತ ವರ್ಷದ ಹಿಂದೆಯಷ್ಟೆ ಊರಿಗೆ ಬಂದು ಅಟೋ ಚಾಲಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ.
ಈತನ ಸಾವಿನಲ್ಲಿ ವ್ಯಾಪಕ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ಅತನ ಸ್ನೇಹಿತರು ಸೇರಿದಂತೆ ಕೆಲವರನ್ನು ಪೊಲೀಸರು ವಿಚಾರಣೆ ಕೂಡ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಣಕಾಸು ಅಥವಾ ಗಾಂಜಾ ವ್ಯವಹಾರದ ಹಿನ್ನಲೆ ಸೇರಿದಂತೆ ವಿವಿಧ ಆಯಾಮದಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಠೆ ಸತ್ಯಾಸತ್ಯತೆ ಹೊರಬರಲಿದೆ. ಅದುವರೆಗೂ ಸ್ಥಳೀಯವಾಗಿ ಇರ್ಪಾನ್ ಸಾವಿನ ಹಿಂದಿರುವ ರಹಸ್ಯ ಹಾಗೆ ಗಿರಕಿ ಹೊಡೆಯಲಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.