ಕಾಡು ಕೋಣಗಳ ದಾಳಿಗೆ ಸಿಲುಕಿದ ವ್ಯಕ್ತಿ ಮಣಿಪಾಲ ಆಸ್ಪತ್ರೆಗೆ ದಾಖಲು
ಕುಂದಾಪುರ: ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವಾಗ ಕಾಡು ಕೋಣಗಳ ಹಿಂಡಿನಿಂದ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಮಣಿಪಾಲ ಆಸ್ಪತೆಗೆ ದಾಖಲಿಸಲಾಗಿದೆ.
ತೊಂಬಟ್ಟು ಕಲ್ಮಕ್ಕಿಯ ಶ್ರೀನಿವಾಸ ನಾಯಕ್ ಎಂಬ ಕೂಲಿ ಕಾರ್ಮಿಕ ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ತಮ್ಮ ವಾಹನದಲ್ಲಿ ಹೋಗುತ್ತಿರುವಾಗ ಸಂಜೆ ಸುಮಾರು 5.30ರ ವೇಳೆಗೆ ದಾರಿಯಲ್ಲಿ ಹಠಾತ್ತನೇ ಎದುರಾದ ಕಾಡು ಕೋಣಗಳ ಹಿಂಡು ಇವರ ಮೇಲೆ ದಾಳಿ ನಡೆಸಿತು. ಇವರ ಮೇಲೆ ಹಾರಿ ತುಳಿದು ಕೋಣಗಳು ತೀವ್ರವಾಗಿ ಜಖಮ್ ಗೊಳಿಸಿದವು. ಸಮೀಪದಲ್ಲೇ ಇದ್ದ ರಿಕ್ಷಾ ಚಾಲಕರು ಸ್ಥಳಕ್ಕೆ ಓಡಿಬಂದು ಕೋಣಗಳನ್ನು ಓಡಿಸಿ, ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸರನ್ನು ಸಮೀಪದ ಆಸ್ಪತ್ರೆಗೆ ಒಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಸಂದೇಶ್ ಗಸ್ತು ಅರಣ್ಯ ಪಾಲಕರನ್ನು ಮಣಿಪಾಲಕ್ಕೆ ಕಳಿಸಿ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. ಗಾಯಾಳುವಿನ ಪತ್ನಿಗೆ ಇಲಾಖೆಯಿಂದ ಸಿಗುವ ಸಹಾಯದ ಬಗ್ಗೆ ಮನವರಿಕೆ ಮಾಡಿ ಧೈರ್ಯ ತುಂಬಿದ್ದಾರೆ. ತನಿಖೆ ನಡೆದಿದೆ.