ಮೇ. 11ರಂದು ಹಿತ್ತಾಳೆ ಕವಚದ 18 ಮೆಟ್ಟಿಲು ಲೋಕಾರ್ಪಣೆ
ಮಂಗಳೂರು: ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಕುಂಬ್ಡಾಜೆ ಪಂಚಾಯತ್ ಉಬ್ರಂಗಳ ಗ್ರಾಮದ ‘ಬಡಗು ಶಬರಿಮಲೆ’ ಎಂದೇ ಪ್ರಸಿದ್ದವಾದ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ 101 ಚೆಂಡೆ ವಾದ್ಯಗಳೊಂದಿಗೆ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ಶ್ರೀ ದೇವರ ಭವ್ಯ ಮಹೋತ್ಸವ ಮೇ 11ರಂದು ಸಂಜೆ 5ರಿಂದ ನಡೆಯಲಿದೆ.
ಪ್ರಕೃತಿ ರಮಣೀಯ ಪ್ರದೇಶದಲ್ಲಿ ನೆಲೆಯಾಗಿರುವ 2000 ವರ್ಷಗಳ ಇತಿಹಾಸವಿರುವ ಉಬಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರವು ‘ಬಡಗು ಶಬರಿಮಲೆ’ಯೆಂದೇ ಇತಿಹಾಸ ಪ್ರಸಿದ್ಧವಾಗಿದೆ. ಶಬರಿಮಲೆ ಯಾತ್ರೆಗೈಯುವ ಸಾವಿರಾರು ಅಯ್ಯಪ್ಪ ವ್ರತಧಾರಿಗಳು ಇಲ್ಲಿ ಬಂದು ಶ್ರೀ ದೇವರ ಅನುಗ್ರಹ ಪಡೆದು ಯಾತ್ರೆ ಕೈಗೊಳ್ಳುವುದು ರೂಢಿ. ಕ್ಷೇತ್ರದಲ್ಲಿ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ಶ್ರೀ ದೇವರ ಭವ್ಯ ಮಹೋತ್ಸವದಲ್ಲಿ ಶ್ರೀ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಽಶರಾದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಹಾಗೂ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಎಡನೀರು ಮಠಾಽಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಉದ್ಘಾಟನೆಗೈದು ಆಶೀರ್ವಚನ ನೀಡಲಿರುವರು.
ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ, ಗೌರವ ಸಲಹೆಗಾರ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ನಾರಾಯಣ ವರ್ಮ ಪಂದಳಂ ಕೊಟ್ಟಾರಂ ಶಬರಿಮಲೆ, ಕ್ಷೇತ್ರದ ದೈವಜ್ಞ ಕೆ. ಸಿ. ನಾಗೇಂದ್ರ ಭಾರದ್ವಾಜ್ ಸುರತ್ಕಲ್, ಹಿರಿಯ ಗುರು ಸ್ವಾಮಿ ರಾಮ ಗುರುಸ್ವಾಮಿ ಉದಯಗಿರಿ, ದಾನಿ ತಾಳಿಪಾಡಿ ಜಾಹ್ನವಿ ಶಾಸ್ತ್ರಿ ಬೆಂಗಳೂರು, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಜಗದೀಶ ಎಸ್., ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಕಿರಣ್ಕುಮಾರ್ ಕುಣಿಕುಳ್ಳಾಯ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 5 ಗಂಟೆಗೆ ಧಾರ್ಮಿಕ ಸಭೆ, 6.30ಕ್ಕೆ 18 ಮೆಟ್ಟಿಲುಗಳ ದ್ವಾರಪೂಜೆ ಹಾಗೂ ಲೋಕಾರ್ಪಣೆ ಹಾಗೂ ರಾತ್ರಿ 8 ಗಂಟೆಗೆ ಶ್ರೀ ದೇವರ ದಿವ್ಯ ಮಹೋತ್ಸವ ಹಾಗೂ ಭೋಜನ ಪ್ರಸಾದ ನಡೆಯಲಿದೆ ಎಂದರು.
ಕ್ಷೇತ್ರದ ಉತ್ಸವ ಸಮಿತಿ ಉಪಾಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಲೆಕ್ಕಪರಿಶೋಧಕ ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ, ಪ್ರಚಾರ ಸಮಿತಿ ಅಧ್ಯಕ್ಷ ರಾಜೇಶ್ ಮಾಸ್ಟರ್ ಅಗಲ್ಪಾಡಿ, ಸ್ವಾಗತ ಸಮಿತಿ ಅಧ್ಯಕ್ಷ ಗೋವಿಂದರಾಜ್ ಮೈಲ್ತೊಟ್ಟಿ, ಧ್ಯಾನ್ ಕೆ. ಉಪಸ್ಥಿತರಿದ್ದರು.