ಅಕ್ರಮ ಮರಳುದಂಧೆ ಪ್ರಕರಣ: 50-60 ಮೆಟ್ರಿಕ್ ಟನ್ ಮರಳು ಸ್ವಾಧೀನ: ಪ್ರಕರಣ ದಾಖಲು
ಮಂಗಳೂರು: ಅಕ್ರಮ ಮರಳುಗಾರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 50-60 ಮೆಟ್ರಿಕ್ ಟನ್ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದು, ಪ್ರಕರಣ ದಾಖಲಾಗಿದೆ.
ಮೇ.8 ರಂದು ಬೆಳಗ್ಗೆ ತೋಡಿಕಾನ ಗ್ರಾಮದ ಶೆಟ್ಟಿಯಡ್ಕ ಎಂಬಲ್ಲಿ, ಆರೋಪಿಗಳಾದ ಮನು ಪೆರ್ಮುಡ ಹಾಗೂ ಚೆಂಬು ಗ್ರಾಮದ ಆಂಟನಿ ಎಂಬವರು ಕಳ್ಳತನದಿಂದ ಕಾನೂನು ಬಾಹಿರವಾಗಿ ನದಿಯಿಂದ ಮರಳನ್ನು ಕದ್ದು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸುಳ್ಯದ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ ಅವರು ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿದ್ದು, ಅಲ್ಲಿ ಸುಮಾರು 50-60 ಮೆಟ್ರಿಕ್ ಟನ್ ತೂಕದ ಸುಮಾರು 20 ಟಿಪ್ಪರ್ ಲೋಡ್ ಮರಳು ಸಂಗ್ರಹವಾಗಿರುವುದು ಕಂಡು ಬಂದಿರುತ್ತದೆ.
ಆ ಮರಳಿನ ಬಗ್ಗೆ ವಿಚಾರಿಸಲಾಗಿ ಯಾವುದೇ ಪರವಾನಗಿ ಪಡೆಯದೇ, ಕಾನೂನು ಬಾಹಿರವಾಗಿ ಆರೋಪಿ ಮನು ಪೆರ್ಮುಡನು ಚೆಂಬು ಗ್ರಾಮದ ಆಂಟನಿ ಎಂಬಾತನೊಂದಿಗೆ ಸೇರಿಕೊಂಡು ಮರಳನ್ನು ಕಳ್ಳತನದಿಂದ ಸಂಗ್ರಹ ಮಾಡಿ, ಬಳಿಕ ಲಾರಿಗಳಿಗೆ ಲೋಡ್ ಮಾಡಿ ಮಾರಾಟ ಮಾಡುತ್ತಿರುವುದು ತಿಳಿದುಬಂದಿರುತ್ತದೆ.
ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಸ್ಥಳದಲ್ಲಿದ್ದ ಅಂದಾಜು 1.20 ಲಕ್ಷ ರೂ. ಮೌಲ್ಯದ ಮರಳನ್ನು ಸ್ವಾಧೀನಪಡಿಸಿ ಆರೋಪಿಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.