ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನೀಟ್ ಯುಜಿ-2026ರ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಕುಪ್ಮ ಕರ್ನಾಟಕ ಸ್ವಾಗತ
ಮಂಗಳೂರು: ಮೇ 3ರಂದು ರಾಷ್ಟ್ರಮಟ್ಟದಲ್ಲಿ ನೀಟ್ ಯುಜಿ-2026ರ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ್ದು, ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ದೃಢ ಪಟ್ಟಿರುವ ಹಿನ್ನಲೆಯಲ್ಲಿ ನೀಟ್ ಯುಜಿ-2026ರ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಣಯವನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ತೆಗೆದುಕೊಂಡಿರುತ್ತದೆ.
ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿರುವ ವ್ಯಕ್ತಿಗಳನ್ನು ಅಥವಾ ಸಂಸ್ಥೆಯ ಮೇಲೆ ಸೂಕ್ತವಾಗಿರುವ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಕುಪ್ಮ ಕರ್ನಾಟಕವು ಆಗ್ರಹಿಸುತ್ತದೆ. ಸುಮಾರು ೨೩ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವರ್ಷ ಪೂರ್ತಿ ತಯಾರಿಯನ್ನು ನಡೆಸಿ ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಮರು ಪರೀಕ್ಷೆಯನ್ನು ನಡೆಸುವುದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿರುತ್ತದೆ.
ಆದ್ದರಿಂದ ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಯಾವುದೇ ಕಾರಣಕ್ಕೂ ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ಕೇಂದ್ರ ತನಿಖಾ ತಂಡ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಕುಪ್ಮಾ ಕರ್ನಾಟಕ ಆಗ್ರಹಿಸುತ್ತದೆ.
ಕೇಂದ್ರ ಸರ್ಕಾರವು ಇನ್ನು ಮುಂದಿನ ದಿನಗಳಲ್ಲಿ ಈ ತರಹದ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯು ನಡೆಯದಂತೆ ಮುತುವರ್ಜಿ ವಹಿಸಬೇಕು. ಇಂತಹ ಪ್ರಾಮುಖ್ಯ ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಲು ಭರವಸೆ ಮೂಡಿಸುವಂತಹ ವಾತಾವರಣ ನಿರ್ಮಿಸುವಂತೆ ಕುಪ್ಮ ಕರ್ನಾಟಕ ಆಗ್ರಹಿಸುತ್ತದೆ. ಸೋರಿಕೆಗಳಾದಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮೇಲೆ ಗಂಭೀರವಾಗಿರುವ ಪರಿಣಾಮಗಳು ಬೀರುತ್ತದೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಯುಜಿ ನೀಟ್-2026ರ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲು ಮಾಡಿರುವ ನಿರ್ಧಾರವನ್ನು ಕುಪ್ಮ ಕರ್ನಾಟಕ ಸ್ವಾಗತಿಸುತ್ತದೆ ಎಂದು ರಾಜ್ಯ ಅಧ್ಯಕ್ಷ ಡಾ. ಮೋಹನ್ ಆಳ್ವ ಮತ್ತು ರಾಜ್ಯ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.