ಮೂಡುಬಿದಿರೆ ಬನ್ನಡ್ಕ ಅಪಘಾತ ವಲಯಕ್ಕೆ ಭೇಟಿ ನೀಡಿ ಪರಿಶೀಲನೆಗೈದ ಹೆದ್ದಾರಿ ಅಧಿಕಾರಿಗಳು, ಶಾಸಕ ಕೋಟ್ಯಾನ್: ಸರ್ವಿಸ್ ರಸ್ತೆ ನಿರ್ಮಿಸಲು ಖಡಕ್ ಸೂಚನೆ

ಮೂಡುಬಿದಿರೆ ಬನ್ನಡ್ಕ ಅಪಘಾತ ವಲಯಕ್ಕೆ ಭೇಟಿ ನೀಡಿ ಪರಿಶೀಲನೆಗೈದ ಹೆದ್ದಾರಿ ಅಧಿಕಾರಿಗಳು, ಶಾಸಕ ಕೋಟ್ಯಾನ್: ಸರ್ವಿಸ್ ರಸ್ತೆ ನಿರ್ಮಿಸಲು ಖಡಕ್ ಸೂಚನೆ


ಮೂಡುಬಿದಿರೆ: ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಮೂಡುಬಿದಿರೆ ವ್ಯಾಪ್ತಿಯ ಬನ್ನಡ್ಕ ಪ್ರದೇಶದಲ್ಲಿ ಕಳೆದ ಒಂದು ವಷ೯ದಿಂದ ನಿರಂತರ ಅಪಘಾತಗಳಾಗಿ ಸಾವು ನೋವು ಸಂಭವಿಸುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಸಕ ಉಮಾನಾಥ ಕೋಟ್ಯಾನ್,  ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು, ಗುತ್ತಿಗೆದಾರರೊಂದಿಗೆ ಮಂಗಳವಾರ ಪರಿಶೀಲನೆಗೈದು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು. 


ಸ್ಥಳೀಯರಾದ ಸೂರಜ್ ಜೈನ್ ಅವರು ಮಾತನಾಡಿ ರಾ. ಹೆದ್ದಾರಿಯ ಎಲ್ಲಾ ಕಡೆಗಳಲ್ಲೂ ಸವೀ೯ಸ್ ರಸ್ತೆಗಳಿವೆ ಆದರೆ ಈ ಪ್ರದೇಶದಲ್ಲಿಲ್ಲ. ಒಂದು ಸಾವಿರಕ್ಕಿಂತಲೂ ಹೆಚ್ಚು ಜನ ಇಲ್ಲಿ ವಾಸಿಸುತ್ತಿದ್ದಾರೆ. ಆ ಕಡೆಯಿಂದ ಈ ಕಡೆಯ ರಸ್ತೆಗೆ ಬರಬೇಕಾದರೆ ಎರಡೂವರೆ ಕಿ.ಮೀ. ಸುತ್ತು ಬಳಸಿ ಬರಬೇಕಾಗಿದೆ. ಅಲ್ಲದೆ ಎಸ್‌ಕೆಎಫ್ ಕೈಗಾರಿಕೆಯ ಬಳಿ ರಸ್ತೆ ಸಮತಟ್ಟಾಗಿಲ್ಲದಿರುವುದರಿಂದ ವಾಹನಗಳ ಗೋಚರತೆಯಿಲ್ಲದಿರುವುದು,  ಸಮರ್ಪಕವಲ್ಲದ ಪ್ರದೇಶಗಳಲ್ಲಿ ಹೆದ್ದಾರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದು ಮತ್ತು ಅತೀ ಅಗತ್ಯವಿರುವ ಈ ಪರಿಸರದಲ್ಲಿ ಸರ್ವಿಸ್ ರಸ್ತೆ  ನಿರ್ಮಿಸದಿರುವುದು ಮತ್ತು ಅಮನಬೆಟ್ಟು ಕ್ರಾಸ್‌ನಲ್ಲಿ ಸ್ಥಳೀಯ ರಸ್ತೆಯು ಹೆದ್ದಾರಿಗಿಂತ ತೀರಾ ಕೆಳಮಟ್ಟದಲ್ಲಿರುವುದು ಅಪಘಾತ ಹೆಚ್ಚಲು ಕಾರಣವಾಗಿದೆ ಎಂದರು. 


ಮೇ 20 ರೊಳಗೆ ಸರ್ವಿಸ್ ರಸ್ತೆ  ಕಾಮಗಾರಿ ಆರಂಭಿಸದಿದ್ದರೆ  ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದರು. 

ಎಸ್‌ಕೆಎಫ್ ಮತ್ತು ಬನ್ನಡ್ಕ ಗರಡಿ ಮುಂಭಾಗದಲ್ಲಿರುವ ಹೆದ್ದಾರಿ ಪ್ರವೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಬೇಕು. ಕೂಡಲೇ 600 ಮೀಟರ್ ದೂರದವರೆಗೆ ಹೆದ್ದಾರಿಯ ಎರಡೂ ಬದಿ ಸರ್ವಿಸ್ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಮತ್ತು ಅಮನಬೆಟ್ಟು ಕ್ರಾಸ್ ರಸ್ತೆಯನ್ನು ಎತ್ತರಿಸಿ ವಾಹನ ಸವಾರರಿಗೆ ಹೆದ್ದಾರಿ ಸ್ಪಷ್ಟ ಗೊಚರತೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು ಮತ್ತು  ಗುತ್ತಿಗೆದಾರ ಕಂಪನಿ ಡಿಬಿಎಲ್‌ನ ಅಧಿಕಾರಿಗಳಿಗೆ ಸೂಚಿಸಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು ಕೂಡಲೇ ಈ ಸಲಹೆಗಳನ್ನು ಕಾರ್‍ಯಗತಗೊಳಿಸುವುದಾಗಿ ಹೇಳಿದರು. 

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಉಮಾನಾಥ ಕೋಟ್ಯಾನ್ ಅವರು ಸ್ಥಳೀಯರ ಸಲಹೆಯನ್ನು ಪರಿಗಣಿಸಲಾಗಿದೆ. ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸದಿರುವುದೂ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ. ವಾಹನ ಸವಾರರೂ ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದರು. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮಹಮ್ಮದ್ ನಾಝಿರ್, ಡಿಬಿಎಲ್  ಕಂಪನಿಯ ಮ್ಯಾನೇಜರ್ ಪ್ರಸಾದ್, ಸೈಟ್ ಇಂಜಿನಿಯರ್ ಬಾಲಾಜಿ, ಪ್ರಾಜೆಕ್ಟ್ ಜನರಲ್  ಮ್ಯಾನೇಜರ್ ಟಿ ರಾಘವ್‌ರಾವ್, ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪಡುಮಾರ್ನಾಡು ಪಂಚಾಯತ್ ಪಿಡಿಒ  ಸಾಯೀಶ್ ಚೌಟ, ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಮೂಡುಬಿದಿರೆ ಫಾಮ್೯ನ ಅಕ್ಷಯ್ ಜೈನ್, ಸ್ಥಳೀಯರಾದ ಸುಧಾಕರ ಆಚಾರ್ಯ, ಸಂತೋಷ್ ನಾಯ್ಕ್, ಮುಖಂಡರಾದ ರಂಜಿತ್ ಪೂಜಾರಿ, ಬೋಳ ವಿಶ್ವನಾಥ ಕಾಮತ್ ಮತ್ತಿತರರು ಈ ಸಂದಭ೯ದಲ್ಲಿದ್ದರು.

ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನಿಸುವೆ: ಸಂಸದ ಬ್ರಿಜೇಶ್ ಚೌಟ 

ಬನ್ನಡ್ಕದಲ್ಲಿ ಅಪಘಾತಗಳಾಗುತ್ತಿದ್ದರೆ ಅದು ಕೇವಲ ಹೈವೇಯ ಸಮಸ್ಯೆಯಲ್ಲ. ಅಥವಾ ಸವೀ೯ಸ್ ರಸ್ತೆಯಿಲ್ಲವೆನ್ನುವುದು ಕಾರಣವಲ್ಲ. ರಾ. ಹೆದ್ದಾರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ  ಸ್ಟಡಿ ಮಾಡಿ ತಿಳಿಸಲು ಅವರಲ್ಲಿ ಹೇಳಿದ್ದೇನೆ. ಪೊಲೀಸರಲ್ಲಿಯೂ ಸುರಕ್ಷತೆಯ ಬಗ್ಗೆ ಮಾತನಾಡಲಾಗುವುದು.

ಸವೀ೯ಸ್ ರಸ್ತೆಯ ಬಗ್ಗೆ ಪ್ಲ್ಯಾನ್ ನಲ್ಲಿದ್ದರೆ ನೋಡೋಣ ಇಲ್ಲದಿದ್ದರೆ ಪ್ರಪೋಸ್ ಮಾಡುವ ಒಟ್ಟಾರೆಯಾಗಿ  ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಸಂಸದ ಬ್ರಿಜೇಶ್ ಚೌಟ ಪತ್ರಿಕೆಗೆ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article