ಜೀವರಾಜ್ ಪ್ರಮಾಣವಚನ ಸ್ವೀಕಾರಕ್ಕೆ ತನ್ನಿಂದ ಯಾವುದೇ ವಿಳಂಬವಾಗಿಲ್ಲ: ಸ್ಪೀಕರ್ ಯು.ಟಿ. ಖಾದರ್
ಮಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಜೀವರಾಜ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ತನ್ನಿಂದ ಯಾವುದೇ ವಿಳಂಬವಾಗಿಲ್ಲ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ವಿಶ್ವಾಸದಲ್ಲಿ ನಡೆಯಬೇಕೇ ಹೊರತು ಆರೋಪದ ಮೂಲಕ ಅಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂಗಳವಾರ 11 ಗಂಟೆಗೆ ಅರ್ಜಿ ನೀಡಿದ್ದಾರೆ. ನಿಯಮಾವಳಿ ಪ್ರಕಾರ ಅಭಿಪ್ರಾಯ ಪಡೆದು ಸಮಯ ನೀಡಲಾಗುತ್ತದೆ. ಅಷ್ಟರಲ್ಲೇ ವಿಳಂಬವಾಗಿದೆ ಎನ್ನುವುದು ಸರಿಯಲ್ಲ. ಸಂವಿಧಾನ ಮತ್ತು ಕಾನೂನಿನಡಿ ಅವಕಾಶ ಕೊಡಲೇಬೇಕು. ಇದೊಂದು ವಿಶಿಷ್ಟ ಸನ್ನಿವೇಶ. ವಿಳಂಬ ಮಾಡುವ ಉದ್ದೇಶವೇ ಇಲ್ಲ. ಆದರೆ ಸಂವಿಧಾನ ಪೀಠದ ಬಗ್ಗೆ ಸಂಶಯ, ತಪ್ಪು ಅಭಿಪ್ರಾಯ ಬರುವ ರೀತಿಯಲ್ಲಿ ಚರ್ಚಿಸುವುದು, ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯಪಾಲರು ಕರೆ ಮಾಡಿ ಮಾತನಾಡಿದ್ದು, ತಡ ಆಗಿಲ್ಲ ಎಂಬುದನ್ನು ಅವರಿಗೆ ತಿಳಿಸಲಾಗಿದೆ ಎಂದವರು ಹೇಳಿದರು.
ಸರಕಾರ ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ಮುಖ್ಯಮಂತ್ರಿ ಹೇಳಿರುವ ಕುರಿತ ಪ್ರಶ್ನೆಗೆ, ಇದು ನನಗೆ ಸಂಬಂಧಪಡದ ವಿಚಾರ. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ ಎಂದರು.
ಪಕ್ಷಾಂತರ ನಿಷೇಧ ಕಾನೂನು ಪರಿಶೀಲನೆಗೆ ಸಭೆ..
ಪಕ್ಷಾಂತರ ನಿಷೇಧ ಕಾನೂನು ಪರಿಶೀಲನೆಗೆ ಸಂಬಂಧಿಸಿ ಲೋಕಸಭೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರಿಂದ ರಚಿಸಲ್ಪಟ್ಟ ಉನ್ನತ ಮಟ್ಟದ ಸಮಿತಿಯ ೩ನೇ ಸಭೆ ಕರ್ನಾಟಕದಲ್ಲಿ ಜೂನ್ ಅಂತ್ಯಕ್ಕೆ ನಡೆಯಲಿದೆ. ಬಳಿಕ ಸಮಿತಿ ತನ್ನ ವರದಿಯನ್ನು ಲೋಕಸಭೆಗೆ ಮಂಡಿಸಲಿದೆ ಎಂದರು.
ಚುನಾಯಿತ ಪ್ರತಿನಿಧಿಗಳು ಪದೇ ಪದೇ ಪಕ್ಷಾಂತರ ಮಾಡುವುದ್ನು ತಡೆಯಲು ಭಾರತದ ಸಂವಿಧಾನದ 10ನೇ ವಿಧಿಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಸ್ಪೀಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದರು.
ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ನಾಗಲ್ಯಾಂಡ್ ರಾಜ್ಯಗಳ ಸ್ಪೀಕರ್‌ಗಳ ಸಮಿತಿ ಇದಾಗಿದ್ದು, ಈಗಾಗಲೇ ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಸಮಿತಿ ಸಭೆ ನಡೆದಿದೆ. ಚುನಾಯಿತ ಜನಪ್ರತಿನಿಧಿ ಪಕ್ಷಾಂತರಗೊಂಡಾಗ ಅರ್ಹತೆ ಖಾತರಿಪಡಿಸುವುದು, ಪಕ್ಷದ ಜೊತೆಯಲ್ಲಿ ಇಲ್ಲದ ಸಂದರ್ಭದಲ್ಲಿ ವಿಶ್ವಾಸ ಮತದಲ್ಲಿ ಭಾಗವಹಿಸುವ ಅವಕಾಶವನ್ನು ನಿರಾಕರಿಸುವುದು, ಪಕ್ಷಾಂತರಗೊಂಡ ಶಾಸಕರಿಗೆ ಸಚಿವ ಹುದ್ದೆ ಅಥವಾ ನಿಗಮ, ಮಂಡಳಿಯಲ್ಲಿ ಸ್ಥಾನಮಾನ ಮಾಡಬಾರದು ಎಂಬ ಕುರಿತಾದ ಶಿಫಾರಸುಗಳ ಬಗ್ಗೆ ಚರ್ಚೆ ನಡೆದಿದೆ. ಅಂತಿಮ ಸಭೆ ಕರ್ನಾಟಕದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಉತ್ತರ ಪ್ರದೇಶ ಸ್ಪೀಕರ್ ನೇತೃತ್ವದಲ್ಲಿ ವಿಧಾನ ಮಂಡಲದ ನಿಯಮ ಮತ್ತು ಪ್ರಕ್ರಿಯೆಗಳ ಕುರಿತಂತೆ ಹಿಮಾಚಲಪ್ರದೇಶ, ಸಿಕ್ಕಿಂ, ದಿಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಒಳಗೊಂಡ ಇನ್ನೊಂದು ಉನ್ನತ ಮಟ್ಟದ ಸಮಿತಿಯ ಸಭೆಯು ಮೇ 12 ಮತ್ತು 13ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.