ಮೇ 17ರಂದು ಮೂಡುಬಿದಿರೆಯಲ್ಲಿ ನಾದ ಧ್ಯಾನ ಚಕ್ರ-8 ಕಾರ್ಯಕ್ರಮ

ಮೇ 17ರಂದು ಮೂಡುಬಿದಿರೆಯಲ್ಲಿ ನಾದ ಧ್ಯಾನ ಚಕ್ರ-8 ಕಾರ್ಯಕ್ರಮ


ಮೂಡುಬಿದಿರೆ: ಪಿರಮಿಡ್ ಸ್ಪಿರಿಚುಯಲ್ ಸೊಸೈಟೀಸ್ ಮೂವ್‌ಮೆಂಟ್ (ಪಿಎಸ್‌ಎಸ್‌ಎಂ), ಬೆಂಗಳೂರಿನ ಪಿರಮಿಡ್ ವರ್ಲ್ಡ್ ಫೌಂಡೇಶನ್ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಹಯೋಗದಲ್ಲಿ ವಿದ್ಯಾಗಿರಿಯಲ್ಲಿರುವ  ಕೃಷಿ ಸಿರಿ ಸಭಾಂಗಣದಲ್ಲಿ ಮೇ 17ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ "ನಾದ ಧ್ಯಾನ ಚಕ್ರ-8" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಂತರಾಷ್ಟ್ರೀಯ ಧ್ಯಾನ ತರಬೇತುದಾರ ಡಾ.ಅಯ್ಯಪ್ಪ ಪಿಂಡಿ ತಿಳಿಸಿದರು. 

ಅವರು ಶುಕ್ರವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಮನಸ್ಸಿನ ಶಾಂತಿ, ಒತ್ತಡ ಮುಕ್ತ ಜೀವನ ಹಾಗೂ ಆರೋಗ್ಯ ಸುಧಾರಣೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಯ್ಯಪ್ಪ ಪಿಂಡಿ, ಆಧುನಿಕ ಜೀವನಶೈಲಿಯಲ್ಲಿ ಯೋಗ ಮತ್ತು ಧ್ಯಾನ ಅತೀ ಅಗತ್ಯವಾಗಿದೆ ಎಂದರು. ಈಗಾಗಲೇ ತುಮಕೂರು, ಬಳ್ಳಾರಿ, ಹಾಸನ, ಚನ್ನರಾಯಪಟ್ಟಣ ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಎಂಟು ಉಚಿತ ಧ್ಯಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಬಾರಿ ಸುಮಾರು 5,000 ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಶಾಸ್ತ್ರೀಯ ನಾದದೊಂದಿಗಿನ ಧ್ಯಾನವು ಮಾನಸಿಕ ನೆಮ್ಮದಿಗೆ ಪೂರಕವಾಗಲಿದೆ ಎಂದು ಅವರು ವಿವರಿಸಿದರು.

ಅಂತರಾಷ್ಟ್ರೀಯ ಧ್ಯಾನ ತರಬೇತುದಾರ ಡಾ.ಅಯ್ಯಪ್ಪ ಪಿಂಡಿ ನೇತೃತ್ವದಲ್ಲಿ, ಪಿಎಸ್‌ಎಸ್‌ಎಂ ಸಂಸ್ಥಾಪಕ ಬ್ರಹ್ಮರ್ಷಿ ಪತ್ರೀಜಿ ಮಾರ್ಗದರ್ಶನದಂತೆ ರೂಪುಗೊಂಡಿರುವ ಈ ಕಾಯ೯ಕ್ರಮವು ಬೆಳಿಗ್ಗೆ 8:30ಕ್ಕೆ ಉದ್ಘಾಟನೆ ನೆರವೇರಲಿದ್ದು, ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸತತ ಮೂರು ಗಂಟೆಗಳ ಕಾಲ ನಾಡ ಧ್ಯಾನ, ಆನಾಪಾನಸತಿ ಧ್ಯಾನದ ಬಗ್ಗೆ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಉಚಿತವಾಗಿ ಸಾತ್ವಿಕ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಹೆಚ್ಚಿನ ಮಾಹಿತಿಗಾಗಿ ಆದಿಶಂಕರಾಚಾರ್ಯ ಹೀಲಿಂಗ್ ಪಿರಮಿಡ್ ಧ್ಯಾನ ಕೇಂದ್ರದ 96112 68941 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೇಖಾ ರವಿರಾಜ್ ಶೆಣೈ, ರೂಪಾ ಶಶಿಕಾಂತ್ ನಾಯಕ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article