ಹೆಚ್ಚುವರಿ ದರದಲ್ಲಿ ರಸಗೊಬ್ಬರ ಮಾರಾಟ ಜಾಲ ಪತ್ತೆ
Friday, June 12, 2026
ಬಂಟ್ವಾಳ: ಯೂರಿಯಾ ರಸಗೊಬ್ಬರವನ್ನು ಕಾನೂನು ಬಾಹಿರವಾಗಿ ಹೆಚ್ಚುವರಿ ದರದಲ್ಲಿ ಮಾರಾಟಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ವಿಟ್ಲ ಪೊಲೀಸರು ಈ ಸಂಬಂಧ ಓರ್ವನನ್ನು ಬಂಧಿಸಿ, ಅತನಿಂದ 632 ಚೀಲ ರಸಗೊಬ್ಬರ ವಶಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಬೋಳಂತೂರು ಎಂಬಲ್ಲಿ ನಡೆದಿದೆ.
ಸರ್ಕಾರದಿಂದ ರಿಯಾಯಿತಿ ದರದಲ್ಲಿ ರೈತರಿಗೆ ಸಿಗುವ ರಸಗೊಬ್ಬರವನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವಿಟ್ಲ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ನೇತೃತ್ವದ ತಂಡ ದಾಳಿ ನಡೆಸಿದ್ದು, ಆರೋಪಿ ಮೊಹಮ್ಮದ್ ಅಶ್ರಫ್ ಎಂಬಾತ ತನ್ನ ಮನೆಯ ಬಳಿ, ಕೃಷಿ ಗ್ರೇಡಿನ ಯೂರಿಯಾ ರಸಗೊಬ್ಬರವನ್ನು ಕೈಗಾರಿಕೆ ಬಳಕೆಗೆ ತಾಂತ್ರಿಕ ಗ್ರೇಡಿನ ಚೀಲಗಳಿಗೆ ಮರು ಪೊಟ್ಟಣೀಕರಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಟ್ಟು 45 ಕೆ.ಜಿ.ತೂಕದ 632 ಚೀಲಗಳು ಮರು ಪೊಟ್ಟಣಿಕರಿಸಲಾಗಿದ್ದು,ಇದನ್ನು ಸಹಿತ ಲಾರಿಯನ್ನು ಪೊಲೀಸರು ವಶಡಿಸಿದ್ದಾರೆ.
ಬಳಿಕ ಮುಂದಿನ ಕಾನೂನು ಕ್ರಮಕ್ಕಾಗಿ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಂದನ ಶೆಣೈ ಪಿ. (ತಾಂತ್ರಿಕ) ಅವರಿಗೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೃಷಿ ನಿರ್ದೇಶಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.