ವಿದ್ಯುತ್ ಪ್ರವಹಿಸಿ ವೃದ್ಧ ಮೃತ್ಯು: ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ
ಮೊಡಂಕಾಪು ನಿವಾಸಿ ಕೃಷ್ಣಪ್ಪ ಕುಲಾಲ್ ಎಂಬವರು ವಿದ್ಯುತ್ ಸ್ಪರ್ಶಿಸಿ ದಾರುಣವಾಗಿ ಮೃತಪಟ್ಟಿದ್ದು, ಶಂಭೂರು ಎ.ಎಂ.ಆರ್. ವಿದ್ಯುತ್ ಸ್ಥಾವರದಿಂದ ಮೊಡಂಕಾಪು ಸಬ್‌ಸ್ಟೇಷನ್‌ಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗದ ಕೆಳಭಾಗದಲ್ಲಿ ಈ ಅಪಘಾತ ಸಂಭವಿಸಿದ ಹಿನ್ನಲೆಯಲ್ಲಿ ಮೃತರ ಮನೆಯವರು ಹಾಗೂ ಸಾರ್ವಜನಿಕರು ಮೆಸ್ಕಾಂ ಹಾಗೂ ಎಎಂಆರ್ ಡ್ಯಾಂ ಅಧಿಕಾರಿಗಳು ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದರು.
ವಿದ್ಯುತ್ ಮಾರ್ಗದ ಕಾಮಗಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರಲ್ಲದೆ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಘಟನೆಯ ಸುದ್ದಿ ತಿಳಿದ ಮೆಸ್ಕಾಂ ಹಾಗೂ ಎ.ಎಂ.ಆರ್. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಅವೈಜ್ಞಾನಿಕ ಕಾಮಗಾರಿ ಆರೋಪ:
ಮಾಜಿ ಬೂಡ ಅಧ್ಯಕ್ಷ ಸದಾಶಿವ ಬಂಗೇರ ಅವರು ಈ ಸಂದರ್ಭ ಪ್ರತಿಕ್ರಿಯಿಸಿ, ಎ.ಎಂ.ಆರ್. ಸಂಸ್ಥೆಯ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆದಿರುವುದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. 110 ಕೆ.ವಿ ವಿದ್ಯುತ್ ಮಾರ್ಗದ ಕಾಮಗಾರಿಯಲ್ಲಿ ಕಾರಿಡಾರ್ ಅಗಲ, ವಿದ್ಯುತ್ ತಂತಿಗಳ ಎತ್ತರ ಸೇರಿದಂತೆ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿಲ್ಲ ಎಂದು ಅವರು ದೂರಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಆಸ್ಪತ್ರೆ ಹಾಗೂ ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ ಹಿನ್ನಲೆಯಲ್ಲಿ ಬಂಟ್ವಾಳ ನಗರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.