ಮೂರು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧ-ಜೀವನ್ಮರಣ ಸ್ಥಿತಿಯಲ್ಲಿ ಚರಂಡಿಯಲ್ಲಿ ಪತ್ತೆ: ರಕ್ಷಣೆ
ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂಬವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು.
ಈ ಬಗ್ಗೆ ಮನೆಮಂದಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಸಂಶಯವಿರುವ ಕೆರೆ, ಮತ್ತು ಹಳ್ಳಗಳಲ್ಲಿ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ.
ಶುಕ್ರವಾರ ಬೆಳಗ್ಗೆ ಸಂಬಂಧಿಕರು ಮತ್ತು ಕೋಡಪದವು ಮಾರುತಿ ಫ್ರೆಂಡ್ಸ್ ತಂಡವು ಸಾರ್ವಜನಿಕರ ನೇತೃತ್ವದಲ್ಲಿ ಹುಟುಕಾಟ ಆರಂಭಿಸಿದ್ದರು. ಈ ವೇಳೆ ಕುಕ್ಕಿಲದ ಅಡಿಕೆ ತೋಟದ ನೀರು ಹರಿಯುವ ಚರಂಡಿಯಲ್ಲಿ ಗಿರಿಯಪ್ಪ ಸಪಲ್ಯ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅವರಿಗೆ ಪ್ರಾಥಮಿಕ ಶುಶ್ರೂಷೆ ನೀಡಿ, ವಿಟ್ಲದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಿರಿಯಪ್ಪರ ರಕ್ಷಣಾ ಕಾರ್ಯಾಚರಣೆ ಕೋಡಪದವು ಮಾರುತಿ ಫ್ರೆಂಡ್ಸ್ ತಂಡದ ಮನೋಹರ, ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಮಾವೆ, ಮಾಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರವಿಂದ ರೈ, ರೈತ ಮೋರ್ಚಾ ಅಧ್ಯಕ್ಷ ಉಮೇಶ್ ಶೆಟ್ಟಿ, ಸೀತಾರಾಮ ಗೌಡ, ಮುರಳಿ ಭಟ್, ಮನೋಹರ ಕುಕ್ಕಿಲ ನೇತೃತ್ವದಲ್ಲಿ ನಡೆದಿದೆ.