ಮಂಗಳೂರಿನಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ವಾಟರ್ ವೇಸ್ ಲೀಜರ್ ಟೂರಿಸಂನಿಂದ ತಾತ್ವಿಕ ಒಪ್ಪಿಗೆ
ಮಂಗಳೂರಿನಿಂದ ಕ್ರೂಸ್ ಸೇವೆ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯ, ಕಾರ್ಯಾಚರಣೆಯ ಅವಶ್ಯಕತೆಗಳು, ಮಾರುಕಟ್ಟೆ ಅವಕಾಶಗಳು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು.
ಸಭೆಯ ವೇಳೆ ಮಂಗಳೂರು ಕರಾವಳಿ ಪ್ರದೇಶದ ಪ್ರವಾಸೋದ್ಯಮ ಮಾರುಕಟ್ಟೆ, ಪ್ರವಾಸಿಗರ ಬೇಡಿಕೆ ಹಾಗೂ ವಾಣಿಜ್ಯ ಸಾಧ್ಯತೆಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಅಗತ್ಯವನ್ನು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು. ಅಲ್ಲದೆ, ಮಂಗಳೂರು ಕರಾವಳಿ ಪ್ರದೇಶವನ್ನು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ವಿಶೇಷ ಪ್ರಚಾರ ಕಾರ್ಯತಂತ್ರ ರೂಪಿಸುವಂತೆ ಸಲಹೆ ನೀಡಿದರು.
ಈ ಹಿನ್ನೆಲೆಯಲ್ಲಿ ಸಂಸ್ಥೆಯ ತಾಂತ್ರಿಕ ತಂಡವು ಮುಂದಿನ ತಿಂಗಳು ಮಂಗಳೂರಿಗೆ ಭೇಟಿ ನೀಡಿ, ಬಂದರು ಮೂಲಸೌಕರ್ಯ, ಪ್ರವಾಸೋದ್ಯಮ ಸಾಮರ್ಥ್ಯ, ಕಾರ್ಯಾಚರಣೆಯ ಸಾಧ್ಯತೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಸ್ಥಳ ಪರಿಶೀಲನೆ ನಡೆಸಲಿದೆ.
ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಇತ್ತೀಚೆಗೆ ಮುಂಬೈ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ಗೆ ಭೇಟಿ ನೀಡಿ ಅಲ್ಲಿನ ಪ್ರಯಾಣಿಕರ ಸೌಲಭ್ಯಗಳು, ಟರ್ಮಿನಲ್ ನಿರ್ವಹಣೆ ಹಾಗೂ ಕಾರ್ಯಾಚರಣಾ ವ್ಯವಸ್ಥೆಯನ್ನು ಅಧ್ಯಯನ ಮಾಡಿದೆ.
ಈ ಅಧ್ಯಯನದ ಆಧಾರದ ಮೇಲೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೂಸ್ ಟರ್ಮಿನಲ್ ಅಭಿವೃದ್ಧಿಪಡಿಸುವ ಸಾಧ್ಯತೆ ಕುರಿತು ಪ್ರಾಥಮಿಕ ಕಾರ್ಯಸಾಧ್ಯತಾ ಅಧ್ಯಯನ (Feasibility Study) ಕೈಗೊಳ್ಳುವಂತೆ ಕಾರ್ಯದರ್ಶಿಗಳಾದ ಡಾ ರಾಮ್ ಪ್ರಸಾದ್ ಮನೋಹರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.