ಮುಂಡಾಜೆಯಲ್ಲಿ ಕಾಡಾನೆ ಹಾವಳಿಯಿಂದ ಕೃಷಿ ನಾಶ
Friday, August 14, 2026
ಉಜಿರೆ: ಮುಂಡಾಜೆ ಗ್ರಾಮದ ಕೊಂಬಿನಡ್ಕ ಪರಿಸರದಲ್ಲಿ ಬುಧವಾರ ರಾತ್ರಿ ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಕೃಷಿ ಹಾನಿ ಉಂಟು ಮಾಡಿದೆ.
ದಿಡುಪೆ-ಪೈಚಾರು ರಾಜ್ಯ ಹೆದ್ದಾರಿ ಬದಿಯಿಂದ ಸಂಚರಿಸಿದ ಮರಿಯಾನೆ ಸಹಿತ ಮೂರು ಆನೆಗಳು ಕೊಂಬಿನಡ್ಕದಲ್ಲಿ ಚಂದ್ರಕಲಾ ಗೋಖಲೆ ಅವರ ತೋಟದಲ್ಲಿ ಎಂಟು ತೆಂಗಿನ ಮರ, 50ಕ್ಕಿಂತ ಅಧಿಕ ಬಾಳೆ ಗಿಡ ಹಾಗೂ ನೀರಾವರಿ ಪೈಪಲೈನ್‌ಗೆ ಹಾನಿ ಉಂಟು ಮಾಡಿವೆ.
ಇದೇ ಪರಿಸರದ ದೇರಣ್ಣ, ಶ್ರೀನಿವಾಸ ಕಾಕತ್ಕರ್, ಸುಶೀಲಾ ಮಲೆಕುಡಿಯ, ಗಣಪತಿ ಭಟ್ ಮೊದಲಾದವರ ಮನೆ ಸಮೀಪದವರೆಗೂ ಸಂಚರಿಸಿರುವ ಕಾಡಾನೆಗಳು ಅಲ್ಲಲ್ಲಿ ಹಾನಿ ಉಂಟು ಮಾಡಿವೆ.
ಮೂರು ದಿನಗಳ ಹಿಂದೆ ಕಾಡಾನೆಗಳ ಹಿಂಡು ಇಲ್ಲಿಂದ ಮೂರು ಕಿ.ಮೀ. ದೂರದ ಕುಳೆಂಜಿರೋಡಿ ಎಂಬಲ್ಲಿ ಮಹೇಂದ್ರ ಪರಾಂಜಪೆ ಅವರ ತೋಟಕ್ಕೆ ನುಗ್ಗಿ ಕೃಷಿ ಹಾನಿ ಉಂಟು ಮಾಡಿತ್ತು.