ಎಂಡಿಎಂಎ ಮಾರಾಟ: ಮಾದಕವಸ್ತು ಸಹಿತ ಮೂವರು ಆರೋಪಿಗಳ ಸೆರೆ

ಎಂಡಿಎಂಎ ಮಾರಾಟ: ಮಾದಕವಸ್ತು ಸಹಿತ ಮೂವರು ಆರೋಪಿಗಳ ಸೆರೆ


ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕವಸ್ತು ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗಳಿಂದ ಸುಮಾರು 24 ಲಕ್ಷ ರೂ. ಮೌಲ್ಯದ 240 ಗ್ರಾಂ. ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ. ಬಂಧಿತರನ್ನು ಕೈರಂಗಳ ಗ್ರಾಮದ ನವಾಝ್ ಯಾನೆ ನವ್ವಾ ಯಾನೆ ಮುಡಿಪು ನವಾಝ್ (35), ಕೈರಂಗಳ ಗ್ರಾಮದ ನಟ್ಟಿಹಿತ್ತುಲು ಮನೆಯ ಮುಹಮ್ಮದ್ ಆರೀಫ್ ಎನ್. (36), ಕೈರಂಗಳ ಗ್ರಾಮದ ಮತ್ತೆಬಾರೆ ಮನೆಯ ಲಾಯ್ಡ್ ಡಿಸೊಜ (35)ಎಂದು ಗುರುತಿಸಲಾಗಿದೆ.

ಆರೋಪಿಗಳು ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿಕೊಂಡು ಮಂಗಳೂರಿನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಶನಿವಾರ ಸಂಜೆ ಉಳ್ಳಾಲ ತಾಲುಕಿನ ಮುಡಿಪು ಕಾಯರ್‌ಗೋಳಿ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ನಾಲ್ಕು ಮೊಬೈಲ್ ಫೋನ್, ಟೆಂಪೋ ವಶಪಡಿಸಿಕೊಂಡಿದ್ದಾರೆ. 

ಇವುಗಳ ಒಟ್ಟು ಮೌಲ್ಯ 29,80,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ನವಾಝ್ ವಿರುದ್ಧ ಮಂಗಳೂರು ನಗರದ ಕೊಣಾಜೆ, ಉಳ್ಳಾಲ, ಮೂಲ್ಕಿ, ಸುರತ್ಕಲ್, ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಬೆದರಿಕೆ, ಕೊಲೆಯತ್ನ, ಅಪಹರಣ, ಅತ್ಯಾಚಾರ, ವಂಚನೆ, ಮೋಸ, ಜಾನುವಾರು ಕಳವು ಹಾಗೂ ಮಾದಕವಸ್ತು ಮಾರಾಟ ಸಹಿತ 16 ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾದಕವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article