ಡಾ. ಎಂ.ಎನ್. ರಾಜೇಂದ್ರ ಕುಮಾರ್: ಸಮಾಜಮುಖಿ ಕಾರ್ಯಗಳಿಗೆ ಚಾಲನೆ
‘ಆರೋಗ್ಯ, ಆಯಸ್ಸು, ಉತ್ತಮ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ನಮ್ಮೆಲ್ಲರ ಕರ್ತವ್ಯ‘: ಪೇಜಾವರ ಶ್ರೀ
ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಿಜಯದಶಮಿ ಹಾಗೂ ನವರಾತ್ರಿ ಪರ್ವಕಾಲದಲ್ಲಿ ನಾವೆಲ್ಲರೂ ಇದ್ದೇವೆ. ಪಂಚ ಮಹಾಪರ್ವಗಳಲ್ಲಿ ನವರಾತ್ರಿ ಉತ್ಸವ ಅತ್ಯಂತ ಮಹತ್ವದ್ದಾಗಿದೆ. ಉತ್ಸವ ಎಂದರೆ ಹರ್ಷ ಮತ್ತು ಉಲ್ಲಾಸವನ್ನು ತುಂಬುವ ಸಂದರ್ಭ. ನಮ್ಮ ನಾಡಿನ ಜನರಿಗೆ ಶಕ್ತಿ ಹಾಗೂ ಪ್ರೇರಣೆ ನೀಡುವ ಇಂತಹ ಉತ್ಸವಗಳು ಸಮಾಜದ ಒಗ್ಗಟ್ಟಿಗೆ ಸಹಕಾರಿಯಾಗಿವೆ. ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಂತಹವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಆರೋಗ್ಯ, ಆಯಸ್ಸು ಮತ್ತು ಉತ್ತಮ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರು ಸಮಾಜದೊಂದಿಗೆ ನೂರು ಕಾಲ ಸುಖವಾಗಿ ಬಾಳಲಿ. ದೇವರ ಸೇವೆ ಮತ್ತು ಸಮಾಜ ಸೇವೆ ಒಂದಕ್ಕೊಂದು ಪೂರಕವಾಗಿವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಕಲ ಜೀವಿಗಳ ಹೃದಯದಲ್ಲಿ ನೆಲೆಸಿರುವುದಾಗಿ ತಿಳಿಸಿದ್ದಾನೆ. ಸಮಾಜದ ಪ್ರತಿಯೊಬ್ಬರಲ್ಲಿಯೂ ಭಗವಂತನನ್ನು ಕಾಣುತ್ತಾ, ಸಮಾನತೆ ಮತ್ತು ಸಹಕಾರದ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ರಾಜೇಂದ್ರ ಕುಮಾರ್ ಅವರು ಇಡೀ ಸಮಾಜಕ್ಕೆ ಮಾದರಿ“ ಎಂದು ನುಡಿದರು.
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ನಾನು ದೈವ ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಪ್ರೀತಿಯಿಂದ ಗುಣಮುಖನಾಗಿ ಬಂದಿದ್ದೇನೆ. ಮುಂದೆ ಇನ್ನಷ್ಟು ಧಾರ್ಮಿಕ ಕೇಂದ್ರಗಳು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನನ್ನ ಮೇಲೆ ನಿರಂತರವಾಗಿ ಇರಲಿ“ ಎಂದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ‘ದೇವರಿಗೆ ಅರ್ಪಿಸಿದ ಹೂವುಗಳನ್ನು ಕಸವಾಗಿ ಪರಿಗಣಿಸದೆ, ಅವುಗಳ ಪಾವಿತ್ರ್ಯವನ್ನು ಕಾಪಾಡಿಕೊಂಡು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಉಡುಪಿಯಲ್ಲಿ ವಿಶೇಷ ಯೋಜನೆಯೊಂದನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ ಮುಜರಾಯಿ ಮತ್ತು ಮುಜರಾಯಿಯೇತರ ದೇವಸ್ಥಾನಗಳು ಸೇರಿದಂತೆ ಅನೇಕ ದೇವಸ್ಥಾನಗಳಿವೆ. ಭಕ್ತರು ಭಕ್ತಿಯಿಂದ ದೇವರಿಗೆ ಅರ್ಪಿಸುವ ಹೂವುಗಳು ದೇವರ ಮುಡಿ, ಪಾದ ಹಾಗೂ ಮೈಮೇಲೆ ಸಮರ್ಪಿತವಾಗಿರುತ್ತವೆ. ಇಂತಹ ಪವಿತ್ರ ಹೂವುಗಳನ್ನು ಕಸಕ್ಕೆ ಎಸೆಯುವ ಬದಲು, ಅವುಗಳಿಂದ ಅಗರಬತ್ತಿ, ಧೂಪ ಮತ್ತು ಕೊಠಡಿ ಸುಗಂಧ ದ್ರವ್ಯಗಳಂತಹ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮರುಬಳಕೆ ಮಾಡಬಹುದು. ದೇವಸ್ಥಾನಗಳಿಂದ ಹೂವುಗಳನ್ನು ಗೌರವಯುತವಾಗಿ ಸಂಗ್ರಹಿಸಲು ಬ್ಯಾಂಕ್ ನೀಡಿರುವ ವಾಹನದ ಸದ್ಬಳಕೆಯಾಗಲಿ“ ಎಂದರು.
ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಎಂ. ಎನ್. ರಾಜೇಂದ್ರ ಕುಮಾರ್ ಅವರು ಯಾವುದೇ ಜಾತಿ, ಸಮುದಾಯ ಅಥವಾ ಕುಟುಂಬಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರ ಸುಖದಲ್ಲಿ ಸಂತೋಷಪಡುವುದು, ಕಷ್ಟದಲ್ಲಿ ಜೊತೆಯಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಆರೋಗ್ಯ ವೃದ್ಧಿಸಿ, ನೂರು ಕಾಲ ಬಾಳುವಂತಾಗಲಿ ಹಾಗೂ ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರವಾಗಿ ದೊರೆಯಲಿ‘ ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೆಎಂಎಫ್ ನಿರ್ದೇಶಕ ರವಿರಾಜ್ ಹೆಗ್ಡೆ, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್, ಮೇಘರಾಜ ಜೈನ್, ಶಶಿಕುಮಾರ್ ಬುಲ್ಯೊಟ್ಟು, ಬೆಳಪು ದೇವಿಪ್ರಸಾದ್ ಬೆಳಪು ಮೊದಲಾದವರು ಉಪಸ್ಥಿತರಿದ್ದೆರು.