ಎಸ್ಐಆರ್ ವಿರುದ್ಧ ಕಾನೂನು ಹೋರಾಟ ನಿರಂತರ: ಮುಖ್ಯಮಂತ್ರಿ
‘ಸ್ಟಿಂಗ್’ ಪ್ರತಿಕ್ರಿಯೆಗೆ ನಕಾರ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಇಂದು ಆಗಮಿಸಿದ ಅವರು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಎಸ್ಐಆರ್ನಲ್ಲಿ ಕಂಡುಬಂದಿರುವ ಹಲವು ಗಂಭೀರ ಅಕ್ರಮಗಳು ಮತ್ತು ಲೋಪದೋಷಗಳನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದೇವೆ. ’ರೈಟ್ ಟು ವೋಟ್ ಈಸ್ ರೈಟ್ ಟು ಲೈವ್’ ಈ ದೇಶದ ಪ್ರಜಾಪ್ರಭುತ್ವ ಮತ್ತು ರಾಜ್ಯದ ಮತದಾರರ ಹಿತಾಸಕ್ತಿಯನ್ನು ಕಾಪಾಡಲು ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಬೃಹತ್ ಪ್ರತಿಭಟನೆ ನಡೆಸಿದ್ದೇವೆ ಮತ್ತು ಮುಂದೆಯೂ ಈ ಹೋರಾಟ ಮುಂದುವರಿಸಲಿದ್ದೇವೆ ಎಂದರು.
ದೆಹಲಿಯ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಅವರು ನನ್ನನ್ನು ವಾಹನಕ್ಕೆ ಹತ್ತುವಂತೆ ಸೂಚಿಸಿದ ಸಣ್ಣ ವಿಚಾರವನ್ನೇ ಮುಂದಿಟ್ಟುಕೊಂಡು, ಕೆಲ ಮಾಧ್ಯಮಗಳು ಹಾಗೂ ಬಿಜೆಪಿ ನಾಯಕರು ’ಇದು ದೊಡ್ಡ ಅವಮಾನ’ ಎಂದು ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ. ಅವರ ಸಂಪೂರ್ಣ ಆಶೀರ್ವಾದದೊಂದಿಗೆ ನಾವು ರಾಜ್ಯದಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿದ್ದೇವೆ. ನಮ್ಮ ನಾಯಕರ ನಡವಳಿಕೆಯಲ್ಲಿ ಅಪಾರ ಮಾನವೀಯತೆ ಮತ್ತು ಶಕ್ತಿ ಇದೆ. ಇಂತಹ ಸಣ್ಣ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ವಿಪಕ್ಷಗಳು ನಿಲ್ಲಿಸಬೇಕು ಎಂದು ಹೇಳಿದರು.
"ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹರ್ಷ ವಾಗುತ್ತಿದೆ. ಜನಾರ್ದನ ಪೂಜಾರಿಯವರು ಕುದ್ರೋಳಿಯಲ್ಲಿ ಆರಂಭಿಸಿದ ದಸರಾ ಇಂದು ಅತ್ಯಂತ ವಿಜೃಂಭಣೆ ಯಿಂದ ನಡೆಯುತ್ತಿದ್ದು, ಸರ್ವ ಸಮುದಾಯಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಅಕ್ಟೋಬರ್ 21ರಂದು ಜಂಬೂಸವಾರಿ ನಡೆಯಲಿದ್ದು, ವಿಜಯನಗರ ಸಾಮ್ರಾಜ್ಯದ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ನೆನಪಿಸುವಂತೆ ಕರಾವಳಿಯ ಜಾನಪದ ಕ್ರೀಡೆ ಕಂಬಳದ ಕೋಣಗಳು ಹಾಗೂ ತುಳುನಾಡಿನ ಆಕರ್ಷಕ ಸ್ತಬ್ಧಚಿತ್ರಗಳು ಕೂಡ ದಸರಾದಲ್ಲಿ ಭಾಗವಹಿಸುತ್ತಿರುವುದು ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ. ಎಂದರು.
ಮಾಜಿ ಸಿಎಂಗೆ ಸಂಬಂಧಿಸಿದ ಸ್ಟಿಂಗ್ ಅಪರೇಷನ್ ತನಿಖೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿ ಈಗಾಗಲೇ ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯಬೇಕು ಎಂದು ಅವರೇ ಹೇಳಿದ್ದರು. ಈಗ ತನಿಖೆ ಆರಂಭವಾದ ಮೇಲೆ ಅದರಲ್ಲಿ ಯಾವುದೇ ಆತಂಕ ಅಥವಾ ಅವಸರದ ಅಗತ್ಯವಿಲ್ಲ. ತನಿಖೆ ಸಂಪೂರ್ಣ ಮುಕ್ತಾಯವಾದ ನಂತರವೇ ಇದರ ಹಿಂದೆ ಯಾರಿದ್ದಾರೆ, ಯಾರು ಏನು ಮಾಡಿದ್ದಾರೆ ಎಂಬ ನಿಖರ ಸತ್ಯಾಂಶಗಳು ಜನರಿಗೆ ತಿಳಿಯಲಿವೆ ಎಂದರು.
ತನಿಖಾ ಪ್ರಕ್ರಿಯೆ ಅತ್ಯಂತ ಸ್ವಚ್ಛವಾಗಿ ನಡೆಯುತ್ತಿದ್ದು, ಎಲ್ಲರೂ ತನಿಖೆಗೆ ಪೂರ್ಣ ಸಹಕಾರ ನೀಡಬೇಕು. ತನಿಖೆಯಿಂದ ಸತ್ಯಾಂಶ ಹೊರಬಂದ ಬಳಿಕ ಎಲ್ಲ ಗೊಂದಲಗಳಿಗೂ ತೆರೆಬೀಳಲಿದೆ ಎಂದು ಹೇಳಿದರು.