ಸರ್ಕಾರಿ ಹಣದ ಸದ್ಬಳಕೆಯಲ್ಲಿ ಲೆಕ್ಕಪರಿಶೋಧನೆಗೆ ಮಹತ್ವ
ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ನಡೆದ ‘ಲೆಕ್ಕಪರಿಶೋಧನಾ ದಿನಾಚರಣೆ’ (ಆಡಿಟ್ ದಿವಸ್) ಅಂಗವಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (Comptroller and Auditor General of India – CAG) ಕಚೇರಿಯ ಕುರಿತು ತಿಳಿಯಿರಿ ಮತ್ತು ಲೆಕ್ಕಪರಿಶೋಧಕರಾಗಿ’ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಹಾಗೂ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ ನಡೆಸುವ ಜವಾಬ್ದಾರಿ ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರಿಗೆ (ಸಿಎಜಿ) ಇದೆ. ರಾಜ್ಯಮಟ್ಟದಲ್ಲಿ ಮಹಾಲೇಖಪಾಲರ (Accountant General – AG) ಕಚೇರಿಗಳ ಮೂಲಕ ಈ ಕಾರ್ಯನಿರ್ವಹಿಸಲಾಗುತ್ತದೆ ಎಂದು ವಿವರಿಸಿದರು.
ಲೆಕ್ಕಪರಿಶೋಧನಾ ವರದಿಗಳನ್ನು ಸಿದ್ಧಪಡಿಸಿ ಸಂಸತ್ತಿನಲ್ಲಿ ಮಂಡಿಸುವ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಹಾಗೂ ಸಾರ್ವಜನಿಕ ಉದ್ದಿಮೆಗಳ ಸಮಿತಿಗಳು ವರದಿಗಳಲ್ಲಿನ ಪ್ರಮುಖ ಅಂಶಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆಯುತ್ತವೆ. ಸಾರ್ವಜನಿಕ ಹಿತದೃಷ್ಟಿಯಿಂದ ಶಿಫಾರಸುಗಳನ್ನು ಮಾಡುತ್ತವೆ. ಇದರಿಂದ ಸರ್ಕಾರಿ ಹಣದ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಸಾಧ್ಯವಾಗುತ್ತದೆ ಎಂದರು.
ಹಿರಿಯ ಲೆಕ್ಕಪರಿಶೋಧನಾಧಿಕಾರಿ ಮಲ್ಲಿಕೇಶ್ವರಿ ಸಿ. ಅವರು ಲೆಕ್ಕಪರಿಶೋಧನಾ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ಮಾತನಾಡಿ, ವಾಣಿಜ್ಯಶಾಸ್ತ್ರದ ವಿದ್ಯಾರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್ಗಳಾಗುವುದರ ಜತೆಗೆ ಸಿಎಜಿ ಕಚೇರಿಯಲ್ಲಿಯೂ ಉದ್ಯೋಗ ಪಡೆಯುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ಸಹಾಯಕ ಲೆಕ್ಕಪರಿಶೋಧನಾಧಿಕಾರಿ ವಿಶಾಲ್ ಕುಮಾರ್ ಛತ್ವಾಣಿ, ಎಂ.ಕಾಂ. ವಿಭಾಗದ ಸಂಯೋಜಕ ಡಾ. ಅಬ್ದುಲ್ ರಜಾಕ್, ಸಹಾಯಕ ಪ್ರಾಧ್ಯಾಪಕರಾದ ಸಂತೋಷ್ ಪ್ರಭು ಎಂ., ರಾಕೇಶ್, ಸೋನಿಯಾ ಮರಿಯೆಟ್ ನೊರೊನ್ಹಾ ಹಾಗೂ ಸ್ಮಿತಾ ಉಪಸ್ಥಿತರಿದ್ದರು.
ರಿಹಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಲಹರಿ ಪ್ರಾರ್ಥಿಸಿದರು. ಅಭಿಲಾಷಾ ಹೆಗ್ಡೆ ವಂದಿಸಿದರು.
ಕಾಲೇಜಿನ ಐಕ್ಯೂಎಸಿ ಹಾಗೂ ಸ್ನಾತಕೋತ್ತರ ವಿಭಾಗಗಳ ಸಹಯೋಗದಲ್ಲಿ ಬೆಂಗಳೂರಿನ ಕರ್ನಾಟಕದ ಪ್ರಧಾನ ಮಹಾಲೇಖಪಾಲರ (ಲೆಕ್ಕಪರಿಶೋಧನೆ–1) ಕಚೇರಿಯು ಕಾರ್ಯಾಗಾರ ಆಯೋಜಿಸಿತ್ತು.