Bantwal: ದಂಪತಿಗಳು ಬೆಂಕಿಗಾಹುತಿ
ಬಂಟ್ವಾಳ: ತಾಲೂಕಿನ ಲೊರೆಟ್ಟೋಪದವು ಸಮೀಪದ ತುಂಡುಪದವು ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಹೃದಯವಿದ್ರಾವಕ ದುರ್ಘಟನೆಯೊಂದರಲ್ಲಿ ದಂಪತಿ ಬೆಂಕಿಗಾಹುತಿಯಾಗಿದ್ದಾರೆ.
ಮನೆಯ ಹೊರಗೆ ಕಸಕಡ್ಡಿಗಳಿಗೆ ಬೆಂಕಿ ಹಚ್ಚಲು ಹೋಗಿ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಗಿಲ್ಬರ್ಟ್ ಕಾರ್ಲೊ( 78) ಮತ್ತು ಇವರ ಪತ್ನಿ ಕ್ರಿಸ್ಟೀನ್ ಕಾರ್ಲೊ(70) ಸ್ಥಳದಲ್ಲೇ ಸಾವನ್ನಪ್ಪಿರುವ ರ್ದುದೈವಿಗಳಾಗಿದ್ದಾರೆ.
ಅಮ್ಮಾಡಿ ಗ್ರಾಮ ಪಂಚಾಯಿತ್ ವ್ಯಾಪ್ತಿಯ ತುಂಡುಪದವು ಎಂಬಲ್ಲಿ ಗಿಲ್ಬರ್ಟ್ ಕಾರ್ಲೊ ಮತ್ತು ಕ್ರಿಸ್ಟೀನ್ ಕಾರ್ಲೊ ವಾಸವಾಗಿದ್ದು, ಅವರ ಮೂವರು ಹೆಣ್ಣುಮಕ್ಕಳಲ್ಲಿ ಇಬ್ಬರು ವಿದೇಶದಲ್ಲಿ ಹಾಗೂ ಒಬ್ಬರು ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಭಾನುವಾರ ಮಧ್ಯಾಹ್ನದ ವೇಳೆ ಮನೆ ಪಕ್ಕ ಕಸಕ್ಕೆಂದು ಹಾಕಲಾದ ಬೆಂಕಿ ವ್ಯಾಪಿಸಿ ಈ ಅವಘಡ ಸಂಭವಿಸಿರಬಹುದು ಎಂಬ ಗುಮಾನಿ ವ್ಯಕ್ತವಾಗಿದೆ.
ಬೆಂಕಿಯನ್ನು ನಂದಿಸಲು ಹೋದ ಮಹಿಳೆ ಹಾಗೂ ಅವರನ್ನು ರಕ್ಷಿಸಲು ಹೋದ ಪತಿ ಇಬ್ಬರೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ. ಅಕ್ಕಪಕ್ಕದಲ್ಲಿರುವ ಮನೆಯವರಿಗೆ ವಿಷಯ ಗೊತ್ತಾಗುವ ಮೊದಲೇ ಇಬ್ಬರೂ ಸಜೀವ ದಹನವಾಗಿದ್ದಾರೆ. ಕೂಡಲೇ ಸ್ಥಳೀಯರು ಅಗ್ನಿಶಾಮಕದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಬೆಂಕಿಯನ್ನು ಸ್ಥಳೀಯರು ನಂದಿಸಿದ್ದಾರೆಯಾದರೂ ಆ ಹೊತ್ತಿಗಾಗಲೇ ಇಬ್ಬರೂ ಸಾವನ್ನಪ್ಪಿದ್ದರೆನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

